ಬಕ್ರೀದ್ ಹಬ್ಬದ ದಿನದಂದು ಸಂಘರ್ಷದ ವಾತಾವರಣ ಸೃಷ್ಟಿಸಲು ಸರಕಾರದಿಂದಲೇ ಪ್ರಯತ್ನ: SDPI

Prasthutha|

ಬೆಂಗಳೂರು: ಯಾವುದೇ ಧಾರ್ಮಿಕ ಆಚರಣೆಗಳು ವಿಶೇಷವಾಗಿ ಹಬ್ಬಗಳು ಸುಸೂತ್ರವಾಗಿ ನಡೆಯುವಂತಹ ವಾತಾವರಣ ಸೃಷ್ಟಿಸುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿ. ಆದರೆ ಈಗ ಮುಸ್ಲಿಮರ ಬಕ್ರೀದ್ ಆಚರಣೆಯ ವೇಳೆ ಬಿಜೆಪಿ ಸರಕಾರವು ಅನಗತ್ಯ ನಿಬಂಧನೆಗಳ ಮೂಲಕ ಸ್ವತಃ ಸಂಘರ್ಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜನರ ಸಂವಿಧಾನಬದ್ಧ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು ಮತ್ತು ಆಯಾ ಧರ್ಮಗಳ ಹಬ್ಬಾಚರಣೆಗಳಿಗೆ ಪೂರಕ ವಾತಾವರಣ ಕಲ್ಪಿಸುವುದು ಸರಕಾರದ ಹೊಣೆ. ಆದರೆ ಬಿಜೆಪಿ ಸಕಾರದ ಭಾಗವಾಗಿರುವ ಸಚಿವರು, ಶಾಸಕರು ದ್ವೇಷ ಹಾಗೂ ಗೊಂದಲಕಾರಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಧರ್ಮಗಳ ಆಚರಣೆಯಂತೆ ಬಕ್ರೀದ್ ಹಬ್ಬವೂ ಒಂದು. ಈ ವೇಳೆ ತ್ಯಾಗ, ಬಲಿದಾನದ ಸಂಕೇತವಾಗಿ ಅನುಪಯುಕ್ತ ಹಾಗೂ ಆರೋಗ್ಯವಂತ ಜಾನುವಾರಿನ ಕುರ್ಬಾನಿ ನಡೆಸಿ ಅದರ ಮಾಂಸವನ್ನು ಕುಟುಂಬಸ್ಥರಿಗೆ ಮತ್ತು ಬಡ ಬಗ್ಗರಿಗೆ ಹಂಚುವ ವಿಶಿಷ್ಟ ಸಂಪ್ರದಾಯ ಶತಶತಮಾನಗಳಿಂದ ನಡೆಯುತ್ತಾ ಬಂದಿದೆ. ಗೋ ಹತ್ಯೆ ನಿಷೇಧ ಕಾನೂನನ್ನು ಪಾಲಿಸುತ್ತಾ ಮತ್ತು ಪರಸ್ಪರ ಧಾರ್ಮಿಕ ಭಾವನೆಗಳ‌ನ್ನು ಗೌರವಿಸುತ್ತಾ ಮುಸ್ಲಿಮರು ವರ್ಷಂಪ್ರತಿ ಕುರ್ಬಾನಿ ಆಚರಿಸುತ್ತಿದ್ದಾರೆ. ಆದರೆ ಪ್ರಸಕ್ತ ಬಿಜೆಪಿ ಸರಕಾರವು ಅನಗತ್ಯ ನಿಬಂಧನೆಗಳ ಮೂಲಕ ಈ ಪವಿತ್ರ ಧಾರ್ಮಿಕ ಆಚರಣೆಯನ್ನು ಅಪರಾಧೀಕರಣಗೊಳಿಸುವ ಸಂಚು ನಡೆಸುತ್ತಿದೆ. ಇದು ರಾಜ್ಯ ಸರಕಾರದ ಅಸಂವಿಧಾನಿಕ ಮತ್ತು ಸರ್ವಾಧಿಕಾರಿ ನಡೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಅವರ ಹಬ್ಬಾಚರಣೆಗೆ ಮುಕ್ತ ಹಾಗೂ ನಿರ್ಭೀತಿಯ ವಾತಾವರಣವನ್ನು ಕಲ್ಪಿಸಬೇಕು. ಅದೇ ರೀತಿ ಎಲ್ಲಾ ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯ ಹಕ್ಕನ್ನು ಖಾತರಿಪಡಿಸಬೇಕೆಂದು ದೇವನೂರ ಪುಟ್ಟನಂಜಯ್ಯ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp