SDPI ಕಚೇರಿ ಮೇಲೆ ದಾಳಿ| ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Prasthutha|

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ ( SDPI) ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿ ಕಚೇರಿಗಳಿಗೆ ಬೀಗ ಹಾಕಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

- Advertisement -

ಈ ಸಂಬಂಧ ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿದ್ದ ಅರ್ಜಿಯ ಮೇಲಿನ ವಾದ ಪ್ರತಿವಾದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿರುವುದಾಗಿ ಪ್ರಕಟಿಸಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಅಡ್ವಕೇಟ್ ಜನರಲ್ ಎಂ. ಅರುಣ್‌ ಶ್ಯಾಮ್, ‘ಎಸ್‌ಡಿಪಿಐ ಕಚೇರಿಗಳನ್ನು ನಿಷೇಧಿತ ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಹಾಗೂ ಸುವ್ಯವಸ್ಥೆ ಹಾಳುಗೆಡುಹುವ ಉದ್ದೇಶದಿಂದಲೇ ಕೆಲವು ಕುಕೃತ್ಯಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ಮನಗಂಡು ಅವುಗಳಿಗೆ ಬೀಗಮುದ್ರೆ ಹಾಕಲಾಗಿದೆ’ ಎಂದರು.

- Advertisement -

ಕೇಂದ್ರ ಸರ್ಕಾರದ ಪರ ಡೆಪ್ಯೂಟಿ ಸಾಲಿಸಿಟರ್ ಜನರಲ್ ಶಾಂತಿಭೂಷಣ್, ‘ಎಸ್‌ಡಿಪಿಐ ಕಚೇರಿಗಳಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಚಟುವಟಿಕೆಗಳು ನಡೆಯುತ್ತಿದ್ದ ಕಾರಣಕ್ಕೆ ಸರ್ಕಾರ ಕಾನೂನು ರೀತಿಯ ಕ್ರಮ ಜರುಗಿಸಿದೆ’ ಎಂದರು.

ಅರ್ಜಿದಾರರ ಪರ ವಕೀಲರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಚುನಾಯಿತ ಜನ ಪ್ರತಿನಿಧಿಗಳಿದ್ದು, ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ. ಆದ್ದರಿಂದ, ಜಪ್ತಿ ಮಾಡಿರುವ ಕಚೇರಿಗಳ ಬೀಗಮುದ್ರೆ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.



Join Whatsapp