ನವದೆಹಲಿ: 2000ದಲ್ಲಿ ಕೆಂಪುಕೋಟೆಯ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರ ಮುಹಮ್ಮದ್ ಆರೀಫ್ ಎಂಬಾತನಿಗೆ ವಿಧಿಸಲಾದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದೆ.
2000ದಲ್ಲಿ ನಡೆದ ಕೆಂಪುಕೋಟೆ ಸ್ಫೋಟದಲ್ಲಿ ಮುಹಮ್ಮದ್ ಆರೀಫ್ ಆರೋಪ ಸಾಬೀತಾಗಿದ್ದು, ಈತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮರುಪರಿಶೀಲಿಸುವಂತೆ ಆತ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪಾಕಿಸ್ತಾನದ ಅಬೋಟಾಬಾದ್ ಮೂಲದ ಆರೀಫ್ ಡಿಸೆಂಬರ್ 22, 2000 ದಂದು ದೆಹಲಿಯ ಕೆಂಪುಕೋಟೆ ಬಳಿ ರಜಪೂತ್ ರೈಫಲ್ಸ್ 7ನೇ ಬೆಟಾಲಿಯನ್ ಸೈನಿಕರ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು.