ಗಾಝಾ: ಇಸ್ರೇಲ್ ಗಾಝಾಪಟ್ಟಿಯಲ್ಲಿ ನಾಗರಿಕರ ಮಾರಣಹೋಮ ಮುಂದುವರೆಸಿದ್ದು, ಇಂದು ಬೆಳಗ್ಗೆ ನಿರಾಶ್ರಿತರ ಶಿಬಿರದ ಮೇಲೆ ನಡೆದ ಇಸ್ರೇಲ್ ದಾಳಿಯಲ್ಲಿ ಪ್ರಾಣ ಕಳಕೊಂಡವರ ಸಂಖ್ಯೆ 47ಕ್ಕೇರಿದೆ. 34 ಮಂದಿ ಸಾವು ಬದುಕಿನ ಮಧ್ಯೆ ಬದುಕುಳಿದಿದ್ದಾರೆ.
ದಾಳಿಗೆ ಬಿಡುವು ನೀಡಬೇಕು ಎಂಬ ಅಮೆರಿಕದ ಮನವಿಯನ್ನೂ ಈ ಮೂಲಕ ಕಡೆಗಣಿಸಿ ಇಸ್ರೇಲ್ ಅಸಹಾಯಕ ನಾಗರಿಕರ ಮಾರಣಹೋಮ ಮುಂದುವರೆಸಿದೆ ಎಂದು ಹೇಳಲಾಗಿದೆ. ಇದು ನಿಜವಾಗಿ ನರಮೇಧ. ಇಲ್ಲಿದ್ದ ಎಲ್ಲರೂ ಶಾಂತಿಪ್ರಿಯರು. ಒಬ್ಬರಾದರೂ ಪ್ರತಿರೋಧ ತೋರಿರಲಿಲ್ಲ ಎಂದು ಶಿಬಿರದಲ್ಲಿದ್ದ ಅರಾಫತ್ ಅಬು ಎಂಬವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಗಾಝಾಪಟ್ಟಿಯಲ್ಲಿನ ನಾಗರಿಕರ, ಅಸಹಾಯಕರ ಸಾವುಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಹೆಚ್ಚಿದೆ. ಕದನವಿರಾಮ ಘೋಷಿಸಲು ಒತ್ತಾಯಿಸಿ ಶನಿವಾರ ವಾಷಿಂಗ್ಟನ್ ಮತ್ತು ಬರ್ಲಿನ್ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿತ್ತು. ಆದರೆ ಇಸ್ರೇಲ್ ತನ್ನ ನಾಗರಿಕರ ಮಾರಣಹೋಮ ಮುಂದುವರಿಸಿದೆ. ದಾಳಿಯ ತೀವ್ರತೆಯನ್ನು ತಗ್ಗಿಸಲು ಅದು ನಿರಾಕರಿಸಿದೆ. ಈ ಪ್ರಾಂತ್ಯದಲ್ಲಿ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್ ದಾಳಿಗೆ ಬಿಡುವು ನೀಡಲು ಕೋರಿದ್ದರೂ ಇಸ್ರೇಲ್ ಕ್ಯಾರೇ ಮಾಡಲಿಲ್ಲ.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ ಒಂದು ತಿಂಗಳಲ್ಲಿ ಯುದ್ಧದಿಂದಾಗಿ 9,400 ಪ್ಯಾಲೆಸ್ತೀನಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅದರಲ್ಲಿ ಸಾವಿರಾರು ಮಕ್ಕಳೂ ಸೇರಿದ್ದಾರೆ.