ಸೌದಿಯಿಂದ ಮಂಗಳೂರಿಗೆ ತೈಲ ತರುತ್ತಿದ್ದ ಹಡಗಿನ ಮೇಲೆ ದಾಳಿ: ಹೊತ್ತಿಕೊಂಡ ಬೆಂಕಿ

Prasthutha|

ನವದೆಹಲಿ: ಸೌದಿ ಅರೇಬಿಯಾದಿಂದ ದಕ್ಷಿಣ ಭಾರತದ ಮಂಗಳೂರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದ ಹಡಗಿನ ಮೇಲೆ ದಾಳಿಯಾಗಿದೆ. ಗುಜರಾತ್ ಬಳಿಯ ಸಮುದ್ರ ಮಧ್ಯೆ ಡ್ರೋಣ್ ದಾಳಿಯಾಗಿದ್ದು, ಹಡಗಿನ ಕಿಟಕಿ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ. ಮಾತ್ರವಲ್ಲ, ಹಡಗಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ಹಡಗನ್ನು ಸಮುದ್ರ ಮಧ್ಯದಲ್ಲೇ ನಿಲ್ಲಿಸಲಾಗಿದೆ. ಅದರಲ್ಲಿ 20 ಮಂದಿ ಭಾರತೀಯ ಸಿಬ್ಬಂದಿಯಿದ್ದಾರೆಂದು ತಿಳಿದು ಬಂದಿದೆ.

- Advertisement -

ಇಸ್ರೇಲ್ ದೇಶಕ್ಕೆ ಸೇರಿದ ಎಂವಿ ಚೆಮ್ ಪ್ಲುಟೋ ಹೆಸರಿನ ಕಾರ್ಗೋ ಹಡಗಿನಲ್ಲಿ ಸೌದಿ ಅರೇಬಿಯಾದಿಂದ ಮಂಗಳೂರಿನ ಬಂದರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದಾಗ ಗುಜರಾತಿನ ಪೋರ್ ಬಂದರಿನಿಂದ 217 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯದಲ್ಲಿ ಘಟನೆ ನಡೆದಿದೆ.

ಭಾರತದ ಸಮುದ್ರ ಆರ್ಥಿಕ ವಲಯದ ಗಡಿಯಲ್ಲೇ ಪೆಟ್ರೋಲಿಂಗ್ ಮಾಡುತ್ತಿದ್ದ ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ವಿಕ್ರಮ್ ನೌಕೆಯನ್ನು ಕೂಡಲೇ ಸ್ಥಳಕ್ಕೆ ಕಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ. ಅಲ್ಲದೆ, ಕೋಸ್ಟ್ ಗಾರ್ಡ್ ಮತ್ತು ನೌಕಾ ಸೇನೆಯ ಹಡಗುಗಳನ್ನು ಕರಾವಳಿಯಲ್ಲಿ ಅಲರ್ಟ್‌ ಆಗಿರಲು ಸೂಚನೆ ನೀಡಲಾಗಿದೆ.

- Advertisement -

ಹಡಗಿನಲ್ಲಿರುವ ಸಿಬ್ಬಂದಿ ಸೇಫ್ ಆಗಿದ್ದಾರೆಂದು ಭಾರತೀಯ ನೌಕಾ ಪಡೆಯ ವಕ್ತಾರರು X ಮಾಡಿದ್ದಾರೆ. ಆದರೆ ಈ ಕುರಿತು ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಹಡಗಿನಲ್ಲಿ ಬೆಂಕಿ ಹತ್ತಿಕೊಂಡು ನೀರು ಒಳನುಗ್ಗಿದೆ, ಇದರಿಂದ ತಾಂತ್ರಿಕ ತೊಂದರೆ ಆಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.



Join Whatsapp