ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಎಚ್ಚರಿಕೆ

Prasthutha|

ನವದೆಹಲಿ: ಗೋಮಾಂಸ ಸೇವಿಸಿದ್ದಾರೆ ಎಂಬ ಶಂಕೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಎರಡು ಹಿಂಸಾಚಾರದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಯನ್ನು ಹೊಣೆಯಾಗಿಸಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

- Advertisement -

ದ್ವೇಷವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರದ ಮೆಟ್ಟಿಲು ಏರಿದವರು ನಿರಂತರವಾಗಿ ದೇಶಾದ್ಯಂತ ಭಯದ ಆಳ್ವಿಕೆಯನ್ನು ಸ್ಥಾಪಿಸುತ್ತಿದ್ದಾರೆ ಎಂದು ರಾಹುಲ್ಗಾಂಧಿ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಗುಂಪಿನ ರೂಪದಲ್ಲಿ ಅಡಗಿರುವ ದ್ವೇಷದ ಅಂಶಗಳು ಬಹಿರಂಗವಾಗಿ ಹಿಂಸಾಚಾರವನ್ನು ಹರಡುವ ಮೂಲಕ ಕಾನೂನಿನ ನಿಯಮಕ್ಕೆ ಸವಾಲು ಹಾಕುತ್ತಿವೆ. ಈ ಕಿಡಿಗೇಡಿಗಳಿಗೆ ಬಿಜೆಪಿ ಸರ್ಕಾರ ಧೈರ್ಯ ತುಂಬಿರುವುದರಿಂದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಆದರೆ ಸರ್ಕಾರ ಮಾತ್ರ ಮೂಖ ಪ್ರೇಕ್ಷಕನಂತೆ ನೋಡುತ್ತಿದೆ ಎಂದು ಆರೋಪಿಸಿದ್ದಾರೆ.

- Advertisement -

ಇಂತಹ ಅಶಿಸ್ತಿನ ವಿಷಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಭಾರತದ ಕೋಮು ಏಕತೆ ಮತ್ತು ಭಾರತೀಯರ ಹಕ್ಕುಗಳ ಮೇಲಿನ ಯಾವುದೇ ದಾಳಿಯು ಸಂವಿಧಾನದ ಮೇಲಿನ ದಾಳಿಯಾಗಿದ್ದು, ಇದನ್ನು ಸಹಿಸುವುದಿಲ್ಲ. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ದ್ವೇಷದ ವಿರುದ್ಧ ಭಾರತವನ್ನು ಒಗ್ಗೂಡಿಸುವ ಈ ಯುದ್ಧವನ್ನು ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಇತ್ತೀಚೆಗೆ ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ಗೋಮಾಂಸ ತಿಂದಿದ್ದಾರೆ ಎಂಬ ಶಂಕೆಯಲ್ಲಿ ವಲಸಿಗನೊಬ್ಬನನ್ನು ಗೋರಕ್ಷಕರ ಗುಂಪು ಹೊಡೆದು ಹತ್ಯೆ ಮಾಡಿದೆ. ಈ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದರು. ಮೃತರು ಚರ್ಖಿ ದಾದ್ರಿ ಜಿಲ್ಲೆಯ ಬಾಂದ್ರಾ ಗ್ರಾಮದ ಬಳಿಯ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು ಮತ್ತು ಜೀವನಕ್ಕಾಗಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಇದೇ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಮಾಲೆಗಾಂವ್ ನಲ್ಲಿರುವ ಮಗಳ ಮನೆಗೆ ಹೋಗಲು ಧುಲೆ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರಿಗೆ ಗೋಮಾಂಸ ಸಾಗಿಸುತ್ತಿದ್ದ ಶಂಕೆಯಲ್ಲಿ ಸಹ ಪ್ರಯಾಣಿಕರು ಥಳಿಸಿದ್ದರು.



Join Whatsapp