ಕುಂದಾಪುರ: ಕೋಟತಟ್ಟು ಪ್ರದೇಶದ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದ ಆರೋಪಿಗಳಾದ ಎಸ್ಸೈ, ಹೆಡ್ಕಾನ್ಸ್ಟೇಬಲ್ ಸೇರಿದಂತೆ ಏಳು ಮಂದಿ ಪೊಲೀಸರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ಗಣಪ ಎಂಬವರ ಮನೆಯಲ್ಲಿ ಡಿ.27 ರಂದು ರಾತ್ರಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಆಗಿನ ಕೋಟ ಎಸ್ಸೈ ಸಂತೋಷ್ ಬಿ.ಪಿ., ಹೆಡ್ ಕಾನ್ಸ್ಟೇಬಲ್ ರಾಮಣ್ಣ, ಅಶೋಕ್ ಶೆಟ್ಟಿ, ಮಂಜು ನಾಥ್ ಮತ್ತು ಇತರ ಪೊಲೀಸರು, ನೆರೆದ ಜನರ ಮೇಲೆ ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಮದುಮಗ ರಾಜೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ಜನವರಿ.3ಕ್ಕೆ ಕುಂದಾಪುರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಜೋಷಿ ಎಲ್ಲರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.