ಲಕ್ನೋ: ರಾಜಕಾರಣಿಯಾಗಿ ಬದಲಾಗಿದ್ದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಹಾಗೂ ಅವರ ಸಹಾಯಕ ಗುಲಾಮ್ ಅಹ್ಮದ್ ಎಂಬವರನ್ನು ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಇವರಿಬ್ಬರನ್ನೂ ಉತ್ತರ ಪ್ರದೇಶ ಪೊಲೀಸರು ಗುರುವಾರ ಝಾನ್ಸಿಯಲ್ಲಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಇದಕ್ಕೂ ಮೊದಲು ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಪ್ರಯಾಗ್ ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅತೀಕ್ ಅಹ್ಮದ್ ಅವರನ್ನು ಗುಜರಾತ್ ನ ಸಾಬರಮತಿ ಜೈಲಿನಿಂದ ರಸ್ತೆ ಮೂಲಕ ಪ್ರಯಾಗ್ ರಾಜ್ ಗೆ ಕರೆತರಲಾಗಿದ್ದರೆ, ಅವರ ಸಹೋದರ ಖಾಲಿದ್ ಅಝೀಮ್ ಅಲಿಯಾಸ್ ಅಶ್ರಫ್ ಅವರನ್ನು ಬರೇಲಿ ಜೈಲಿನಿಂದ ಕರೆತರಲಾಯಿತು.
ಬಿಎಸ್ ಪಿ ಶಾಸಕರಾಗಿದ್ದ ರಾಜು ಪಾಲ್ ಕೊಲೆಯಲ್ಲಿ ಮುಖ್ಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಮತ್ತವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಪ್ರಯಾಗ್ ರಾಜ್ ನ ದೂಮನ್ಗಂಜ್ ನಲ್ಲಿ ಫೆಬ್ರವರಿ 24ರಂದು ಕೊಲೆ ಮಾಡಲಾಗಿತ್ತು. ಉಮೇಶ್ ಅವರ ಪತ್ನಿ ಜಯ ಪಾಲ್ ಅವರು ನೀಡಿದ ದೂರಿನ ಮೇಲೆ ಅತೀಕ್, ಅಶ್ರಫ್, ಶೈಸ್ತಾ ಪರ್ವೀನ್, ಇಬ್ಬರು ಗಂಡು ಮಕ್ಕಳು, ಸಹಾಯಕರಾದ ಗುಡ್ಡು ಮುಸ್ಲಿಂ, ಗುಲಾಂ ಮತ್ತು ಇತರ 9 ಮಂದಿಯ ಮೇಲೆ ಎಫ್’ಐಆರ್ ದಾಖಲಾಗಿದೆ.
2006ರಲ್ಲಿ ಅತೀಕ್ ಮತ್ತು ಅವರ ಸಹಚರರು ಉಮೇಶ್ ಪಾಲ್ ರನ್ನು ಅಪಹರಿಸಿ, ಸಾಕ್ಷ್ಯ ನೀಡದಂತೆ ಒತ್ತಾಯಿಸಿದ್ದರು ಎಂದು ಆರೋಪ ಮಾಡಲಾಗಿದೆ.