ಸುರತ್ಕಲ್ ಟೋಲ್ ‘ಗೇಟ್ ನಲ್ಲಿ ಪ್ರತಿ ದಿನ 11 ಲಕ್ಷ ರೂ. ಅಕ್ರಮ ಸುಂಕ ವಸೂಲಿ: ಐವನ್ ಡಿಸೋಜಾ

Prasthutha|

ಮಂಗಳೂರು: ಸುರತ್ಕಲ್’ನ ಅಕ್ರಮ ಟೋಲ್ ಗೇಟ್ ರದ್ದುಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿ 10 ದಿನ ಕಳೆದರೂ ಪ್ರತಿ ದಿನ 11 ಲಕ್ಷ ರೂಪಾಯಿ ಅಕ್ರಮ ಸುಂಕ ವಸೂಲಿ ಮಾಡುತ್ತಿದ್ದಾರೆ. ಆದರೂ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 36 ಅಕ್ರಮ ಟೋಲ್ ಗೇಟ್’ಗಳು ಇವೆ ಎಂದು ಹೆದ್ದಾರಿ ಖಾತೆ ಸಚಿವರು ಹೇಳಿದ್ದಾರೆ. ಆಮೇಲೆ ಹಲವು ನಾಯಕರು ಇದೇ ಮಾತು ಪುನರುಚ್ಚರಿಸಿದ್ದಾರೆ. ಇದರ ನಡುವೆ ಸಂಸದ ಕಟೀಲ್ ಅವರು ಟೋಲ್ ಗೇಟ್ ತೆಗೆದು ಹಾಕಿದ್ದಕ್ಕೆ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೂ ಅಕ್ರಮ ವಸೂಲಾತಿ ನಿಂತಿಲ್ಲ ಎಂದು ಹೇಳಿದರು.

ಎನ್’ಐಟಿಕೆ ಟೋಲ್ ಗೇಟ್ ತೆಗೆದುದಾಗಿ ಗೆಜೆಟ್ ಪ್ರಕಟಣೆ ಆಗಿ 11 ದಿನ ಕಳೆದಿದೆ. ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ 25 ದಿನಗಳಿಂದ ನಡೆಯುತ್ತಿದೆ. ಆದರೆ ಟೋಲ್ ಗೇಟ್ ತೆಗೆಯಲು ಜಿಲ್ಲಾಧಿಕಾರಿ ಮುಂದಾಗಿಲ್ಲ. ಬ್ರಹ್ಮರಕೂಡ್ಲುನಲ್ಲೂ ಅಕ್ರಮ ಟೋಲ್ ಮೂಲಕ ಪ್ರತಿ ದಿನ 5 ಲಕ್ಷ ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಎನ್’ಐಟಿಕೆ ಟೋಲನ್ನು ಹೆಜಮಾಡಿ ಟೋಲ್’ಗೆ ಸೇರಿಸಿ ಹೆಚ್ಚು ಹಣ ವಸೂಲು ಮಾಡುವುದನ್ನು ನಾವು ವಿರೋಧಿಸುವುದಾಗಿ ಡಿಸೋಜಾ ಹೇಳಿದರು.

- Advertisement -

ಬಂದರು ಬಳಿ ಹೆದ್ದಾರಿಗೆ 75% ಹೆದ್ದಾರಿ ಪ್ರಾಧಿಕಾರ ನೀಡಿದರೆ 25% ಬಂದರು ಮಂಡಳಿ ನೀಡಿರುವಾಗ ಸುಂಕ ವಸೂಲಿ ಏಕೆ? ಸ್ಥಳೀಯ ಶಾಸಕರೂ ಟೋಲ್ ತೆಗೆದು ಹಾಕಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಕೂಡಲೆ ಟೋಲ್ ಗೇಟ್  ಬಳಿ ಹೋಗಬೇಕು. ಅಲ್ಲಿ ಏನು ಸಮಸ್ಯೆ ಇದೆ ಎಂಬುದರ ಬಗ್ಗೆ ಮಾತನಾಡಬೇಕು. ಕೂಡಲೆ ಟೋಲ್ ಗೇಟ್ ತೆಗೆದು ಹಾಕಬೇಕು. ಕೈಗೊಂಬೆಯಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿಯವರ ಅಸಡ್ಡೆ ಇದು. ಜನರೇ ಈಗ ಜಿಲ್ಲಾಧಿಕಾರಿ ವಿರುದ್ಧ ಕೇಸು ಹಾಕಬೇಕಾದ ಕಾಲ ಬಂದಿದೆ ಎಂದು ಡಿಸೋಜಾ ಹೇಳಿದರು.

ಇನ್ನು ಹಾಲಿನ ದರವನ್ನು ಲೀಟರಿಗೆ ರೂ. 5 ಏರಿಸಲು ಹುನ್ನಾರ ನಡೆಸಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಮೊಸರು ಮಜ್ಜಿಗೆ ಮೇಲೆಲ್ಲ ಜಿಎಸ್’ಟಿ ಹಾಕಿದ್ದೀರಿ. ನೀವು ಸಬ್ಸಿಡಿ ಕೊಡಿ. ಬೆಲೆ ಏರಿಸಬೇಡಿ. ಹಾಗೇನೂ ಮಾಡಿದರೆ ನಾವು ಪ್ರತಿಭಟನೆ ನಡೆಸುವುದಾಗಿ ಐವನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಬಿತಾ ಮಿಸ್ಕಿತ್, ಇಬ್ರಾಹಿಂ ಕೋಡಿಜಾಲ್, ಭಾಸ್ಕರ ರಾವ್, ವಿನಾ ಟೆಲ್ಲಿಸ್, ಶಬೀರ್, ಚಿತ್ತರಂಜನ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp