ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ; ಕರ್ನಾಟಕ ವಿವಿ ಉನ್ನತಾಧಿಕಾರಿ ಶಾಮೀಲಾಗಿರುವ ಶಂಕೆ

Prasthutha|

ಧಾರವಾಡ: ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕರ್ನಾಟಕ ವಿವಿ ರಿಜಿಸ್ಟ್ರಾರ್ ಅವರನ್ನು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿ ಉನ್ನತಾಧಿಕಾರಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಮಾರ್ಚ್ 14 ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ ಮುನ್ನ ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಸ್ತುತ ಧಾರವಾಡದಲ್ಲಿರುವ ಡಾ.ಎಚ್.ನಾಗರಾಜ್ ಅವರು, ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ವಿಷಯ ತಜ್ಞರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಬಯಸಿ ಮಾಡಿದ ಕರೆ ಮತ್ತು ಮೆಸೇಜ್ಗೆ ನಾಗರಾಜ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರಿಜಿಸ್ಟ್ರಾರ್ ಅವರನ್ನು ಪ್ರಶ್ನಿಸಿದ ಅದೇ ದಿನ ಸಂಜೆ ಸೌಮ್ಯ ಎಂಬ ಅತಿಥಿ ಉಪನ್ಯಾಸಕಿಯನ್ನೂ ಕೋರ್ಟ್ ವಾರೆಂಟ್ ಪಡೆದು ಅವರ ನಿವಾಸಗಳಲ್ಲಿ ಶೋಧ ನಡೆಸಲು ಕರೆದೊಯ್ದಿದ್ದಾರೆ ಎನ್ನಲಾಗಿದೆ.ಇಬ್ಬರೂ ಮೈಸೂರಿನವರಾಗಿದ್ದು, ಸೌಮ್ಯ ತಮ್ಮ ಕೆಲ ಸ್ನೇಹಿತರಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಕೆಲ ಪ್ರಶ್ನೆಗಳನ್ನು ವಾಟ್ಸಪ್ ಮೂಲಕ ಕಳುಹಿಸಿದ್ದರು ಎಂಬ ಶಂಕೆಯಿಂದ ಅವರನ್ನು ಬಂಧಿಸಲಾಗಿತ್ತು.

- Advertisement -

ಡಾ.ನಾಗರಾಜ್ ಅವರು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದ ಭಾಗವಾಗಿದ್ದು, ಸೌಮ್ಯಾ ಪಿಎಚ್ಡಿ  ಗೈಡ್ ಆಗಿದ್ದರು ಎನ್ನುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಗಳು ಸ್ಪಷ್ಟಪಡಿಸಿವೆ. ಧಾರವಾಡಕ್ಕೆ ವರ್ಗಾವಣೆಯಾಗುವ ಮುನ್ನ ಅವರು ಮೈಸೂರು ವಿವಿಯಲ್ಲಿ ಭೂಗೋಳಶಾಸ್ತ್ರ ಪ್ರೊಫೆಸರ್ ಆಗಿದ್ದರು.

Join Whatsapp