ಬೆಂಗಳೂರು; ಉದ್ಯಮ ಮತ್ತು ಮಾರುಕಟ್ಟೆ ವಲಯದಲ್ಲಿ ವ್ಯಾಪಕ ಸಂಪರ್ಕ ಜಾಲ ಹೊಂದುವ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ತರುವ ನಿರೀಕ್ಷೆ ಹೊಂದಿರುವ ಕನೆಕ್ಟ್ ಪ್ರೋ ಮತ್ತು ಇನ್ ಪ್ಲುಯೆನ್ಸ್ ಪ್ರೋ ಎಂಬ ಎರಡು ಮಹತ್ವದ ಆ್ಯಪ್ ಗಳಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು.
ನಗರದ ಲಲಿತ್ ಅಶೋಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಹಿರಿಯ ನಟ ರಮೇಶ್ ಅರವಿಂದ್, ಹಿರಿಯ ನಟಿ, ಅರಣ್ಯ ಅಭಿವೃದ್ದಿಮ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಸ್ಯಾಂಡಲ್ ವುಡ್ ನಟಿ ಆದಿತಿ ಪ್ರಭುದೇವ್, ಎನ್.ಅರ್.ಐ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾದ ಸಂಚಾಲಕ ದೀಪಕ್ ಸಿಂಗ್ ಹಾಗೂ ಆಕಾರ್ ಮ್ಯಾಕ್ಸ್ ಟೆಕ್ ಪ್ರೆವೈಟ್ ಲಿಮಿಟೆಡ್ ನ ಸಿಇಒ ಸ್ನೇಹಾ ರಾಕೇಶ್ ಉಪಸ್ಥಿತರಿದ್ದರು.
ಕನೆಕ್ಟೋ ಪ್ರೋ ಮೊಬೈಲ್ ಅಪ್ಲಿಕೇಶ್ ಆಗಿದ್ದು, ಈಗಷ್ಟೇ ಆರಂಭವಾಗಿರುವ, ಇನ್ ಕ್ಯೂಬೇಟರ್ ಸೆಂಟರ್ ನಲ್ಲಿರುವ ಸ್ಟಾರ್ಟ್ ಅಪ್ ಗಳಿಗೆ ತನ್ನ ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡಲು ಮತ್ತು ಸೂಕ್ತ ಮಾರುಕಟ್ಟೆ ದೊರಕಿಸಿಕೊಡಲು ಇದು ಸೂಕ್ತ ವೇದಿಕೆಯಾಗಿದೆ. ಕನೆಕ್ಟೋ ಪ್ರೋ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚಿನ ಫಾಲೋವರ್ ಗಳನ್ನು ಹೊಂದಿರುವವರಿಗೆ ಇನ್ ಪ್ಲುಯೆನ್ಸ್ ಪ್ರೋ ವೇದಿಕೆ ಅವಕಾಶದ ಬಾಗಿಲು ತೆರೆಯಲಿದೆ. ಜಾಲತಾಣದಲ್ಲಿ ಹೆಚ್ಚು ಸಂಪರ್ಕ, ಹೆಚ್ಚು ಜನರನ್ನು ತಲುಪುವ ಸಾಮರ್ಥ್ಯ ಇರುವವರಿಗೆ ಇದು ಪ್ರಮುಖ ಆದಾಯ ಮೂಲವೂ ಆಗಿದೆ. ಗ್ರ್ಯಾಂಡ್ ಪ್ರೊಮೋಷನ್ ಗಳನ್ನು ಮಾಡಲು ಇದು ಸಹಕಾರಿಯಾಗಿದೆ.
ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ಜಗತ್ತಿನಲ್ಲಿ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಮಂಚೂಣಿಯಲ್ಲಿದ್ದು, ವಿಶ್ವದ ಎಲ್ಲಾ ನವೋದ್ಯಮಗಳಿಗೆ ಕೌಶಲ್ಯ ಹೊಂದಿರುವ ಕಾರ್ಮಿಕ ಸಂಪನ್ಮೂಲ ಒದಗಿಸುವ ಸಾಮರ್ಥ್ಯವನ್ನು ಕರ್ನಾಟಕ ಹೊಂದಿದೆ. ಇಡೀ ದೇಶ, ವಿಶ್ವಕ್ಕೆ ಸಲ್ಲುವ ರಾಜ್ಯ ಕರ್ನಾಟಕ, ಅಂತಹ ವಿಶೇಷ ನಗರ ಎಂದರೆ ಅದು ಬೆಂಗಳೂರು. ಬರುದ ದಿನಗಳಲ್ಲಿ ಇಡೀ ಜಗತ್ತನ್ನು ಕರ್ನಾಟಕ ಆಳಲಿದ್ದು, ತಂತ್ರಜ್ಞಾನದ ಉತ್ತಮ ಅಭ್ಯಾಸಗಳಿಗೆ, ವಿಶ್ವದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಗರವಾಗಿಯೂ ಹೊರ ಹೊಮ್ಮಲಿದೆ. ದೇಶದ ಶೇ 50ಕ್ಕೂ ಹೆಚ್ಚು ಯೂನಿಕಾರ್ನ್ ಗಳು ಕರ್ನಾಟಕದಲ್ಲಿವೆ. ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡಿದೆ. ಆಡಳಿತ, ವಾಣಿಜ್ಯ ಚಟುವಟಿಕೆ, ಹಣಕಾಸು ಅಷ್ಟೇಕೆ ಕೃಷಿ ಕ್ಷೇತ್ರವೂ ಇದೀಗ ಡಿಟಿಟಲ್ ಫಾರ್ಮಿಂಗ್ ಆಗಿ ರೂಪಾಂತರಗೊಂಡಿದೆ ಎಂದರು.
ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ತಂತ್ರಜ್ಞಾನ ಸಹಕಾರಿಯಾಗಿದ್ದು. ಇದು ಇಂದು ಎಲ್ಲಾ ವಲಯಗಳನ್ನು ಬೆಸೆದುಕೊಂಡು ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ. ಸಮಾಜದಲ್ಲಿ ಸಮಾನತೆ ತರಲು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಸಮಸ್ಯೆಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲು, ತಂತ್ರಜ್ಞಾನ ಸಂಜೀವಿನಿಯಾಗಿದೆ. ಸುಸ್ಥಿರ ಆದಾಯ ಮೂಲಕ್ಕೂ ಸಹ ತಂತ್ರಜ್ಞಾನ ಅಗತ್ಯವಾಗಿದ್ದು, ರಾಜ್ಯದ ಎಲ್ಲಾ ಯುವಕ, ಯುವತಿಯರಿಗೆ ಉದ್ಯೋಗ ದೊರಕಿಸಿಕೊಡಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಜಗತ್ತಿನ ಎಲ್ಲಾ ಅವಕಾಶಗಳನ್ನು ಆಕ್ರಮಿಸಿಕೊಂಡು ಮುನ್ನಡೆಯುವ ಸಾಮರ್ಥ್ಯ ರಾಜ್ಯಕ್ಕಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಬರುವ ದಿನಗಳಲ್ಲಿ ಕರ್ನಾಟಕ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಸಿದ್ದರಾಮಯ್ಯ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಬಗ್ಗೆ ತಾವು ಅಷ್ಟೊಂದು ತಿಳಿದುಕೊಳ್ಳಲು ಹೋಗಿಲ್ಲ. ಆದರೆ ಮೊದಲಿನಿಂದಲೂ ಜನರ ಜತೆ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ. ಮೊಬೈಲ್ ಬಂದ ಸ್ವಲ್ಪ ದಿನ ಬಳಸುತ್ತಿದ್ದೆ. ನಂತರ ರಾತ್ರಿ ವೇಳೆಯಲ್ಲಾ ಕಿರಿಕಿರಿ ಆಗುತ್ತಿದ್ದ ಕಾರಣ ಅಂದಿನಿಂದಲೇ ಮೊಬೈಲ್ ಬಳಸುವುದನ್ನು ಬಿಟ್ಟಿದ್ದೇನೆ. ಆದರೆ ಜನರನ್ನು ತಲುಪಲು ಸಮಾಜಿಕ ಮಾಧ್ಯಮ ತಂಡ ತಮ್ಮ ಜತೆ ಕೆಲಸ ಮಾಡುತ್ತಿದೆ. ಈ ತಂಡದವರು ಇತ್ತೀಚೆಗೆ ತಮಗೆ 6.5 ಲಕ್ಷ ಫಾಲೋವರ್ ಗಳು ಇದ್ದಾರೆ ಎಂದು ಹೇಳಿತು. ಇಷ್ಟೊಂದು ದೊಡ್ಡ ಫಾಲೋವರ್ ಗಳನ್ನು ಹೊಂದಿರುವವರು ಕಡಿಮೆ ಎಂದು ತಿಳಿಸಿದ್ದಾರೆ ಎಂದರು.
ಸಾಮಾಜಿಕ ಮಾದ್ಯಮ ಸದ್ಬಳಕೆಯಾಗಬೇಕು. ಆದರೆ ಇತ್ತೀಚೆಗೆ ಮೊಬೈಲ್ ನಲ್ಲಿ ಮಾತನಾಡುವುದನ್ನೇ ಹ್ಯಾಕ್ ಮಾಡುತ್ತಿರುವ ಬಗ್ಗೆ ಆತಂಕವಿದೆ. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಗುಟ್ಟಾಗಿ ಮಾತನಾಡುವುದು ಸಹ ತನ್ನ ಅರ್ಥ ಕಳೆದುಕೊಂಡಿದೆ. ಹಾಗೆಂದ ಮಾತ್ರಕ್ಕೆ ಸಾಮಾಜಿಕ ಮಾಧ್ಯಮ ಕೆಟ್ಟದ್ದಲ್ಲ. ಹೆಚ್ಚಿನ ರೀತಿಯಲ್ಲಿ ಉಪಯುಕ್ತವಾದದ್ದು. ಮಾಹಿತಿ ತಂತ್ರಜ್ಞಾನ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.