ತೀವ್ರ ಧ್ರುವೀಕರಣದ ಪರಿಣಾಮವನ್ನು ದೃಢಪಡಿಸಿದ ವಿಧಾನಸಭಾ ಚುನಾವಣಾ ಫಲಿತಾಂಶ: ಪಾಪ್ಯುಲರ್ ಫ್ರಂಟ್

Prasthutha|

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ಬಿಜೆಪಿಯ ಗೆಲುವು, ಬಿಜೆಪಿ ಪ್ರೇರಿತ ಭಾರೀ ಪ್ರಮಾಣದ ಕೋಮು ಧ್ರುವೀಕರಣದ ಫಲಿತಾಂಶವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

- Advertisement -


ಬಿಜೆಪಿ ಎಂದಿನಂತೆ ಓಟ್ ಬ್ಯಾಂಕನ್ನು ಓಲೈಸಲು ಕೋಮುವಾದವನ್ನು ನೆಚ್ಚಿಕೊಂಡಿತು ಮತ್ತು ಈ ಮೂಲಕ ಅದು ಚುನಾವಣೆಯ ವೇಳೆ ಚರ್ಚೆಗೆ ಬಂದ ಜೀವನೋಪಾಯದ ವಿಷಯಗಳನ್ನು ಮತ್ತು ವಿಷಯಾಧಾರಿತ ರಾಜಕೀಯವನ್ನು ಬುಡಮೇಲುಗೊಳಿಸುವಲ್ಲಿ ಯಶಸ್ವಿಯಾಯಿತು. ಅದರೊಂದಿಗೆ ಬಿಜೆಪಿ ಮತದಾರರ ಮನೋಸ್ಥಿತಿಯನ್ನು ಕೋಮುವಾದೀಕರಣಗೊಳಿಸಿತು. ಅದರೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಪಡಿಸಿಕೊಂಡು ದ್ವೇಷ ಪ್ರಚಾರವನ್ನು ನಡೆಸಿತು. ಈ ಮೂಲಕ ತನ್ನ ದುರಾಡಳಿತ ಮತ್ತು ಪ್ರಮುಖ ಅಭಿವೃದ್ಧಿಯ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಿತು. ರೈತರ ಪ್ರತಿಭಟನೆಯು ಆಕ್ರೋಶದ ಅಲೆಯಾಗಿ ಮಾರ್ಪಟ್ಟ ರಾಜ್ಯ ಮತ್ತು ವಿಧಾನಸಭೆಗಳಲ್ಲೂ ಬಿಜೆಪಿ ಯಶಸ್ಸು ಗಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಒ.ಎಂ.ಎ.ಸಲಾಂ ಹೇಳಿದ್ದಾರೆ.


ಹಿಂದುತ್ವ ಚುನಾವಣಾ ತಂತ್ರಗಳ ಮುಂದೆ ಜಾತ್ಯತೀತ ಪಕ್ಷಗಳು ಇನ್ನೂ ಪರಿವೇ ಇಲ್ಲದಂತೆ ನಿಂತಿವೆ ಮತ್ತು ಅವು ಮೃದು ಹಿಂದುತ್ವ ಹಾಗೂ ಜಾತ್ಯತೀತತೆಯ ಅರೆ ಬೆಂದ ಕಲ್ಪನೆಯ ಮೇಲೆಯೇ ನಂಬಿಕೆ ಇಡುತ್ತಿವೆ. ಈ ರೀತಿಯ ಕುಟಿಲ ವರ್ತನೆ ಈ ಹೊತ್ತಿನ ಅಗತ್ಯವಲ್ಲ. ಬದಲಿಗೆ ಸಾಂವಿಧಾನಿಕವಾಗಿ ಖಾತರಿಪಡಿಸಲಾದ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ತಂತ್ರಗಾರಿಕೆ ಮತ್ತು ವಿಶಾಲ ಮೈತ್ರಿಯ ಅನಿವಾರ್ಯತೆ ಇದೆ. ಒಂದು ದೇಶವಾಗಿ ನಮ್ಮ ಅಸ್ತಿತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿರುವ ಕೋಮು ಧ್ರುವೀಕರಣ, ದ್ವೇಷ ಮತ್ತು ನರಮೇಧದ ಕರೆಗಳ ಸನ್ನಿವೇಶದ ಗಂಭೀರತೆಯನ್ನು ಅವಲೋಕಿಸಲು ಮತ್ತು ಅದನ್ನು ಪ್ರಸ್ತುತಪಡಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಈ ಪಕ್ಷಗಳು ಸ್ವಯಂ ಆತ್ಮಾವಲೋಕನ ಮಾಡಿಕೊಂಡು ತಮ್ಮ ವೈಫಲ್ಯಗಳಿಂದ ಪಾಠ ಕಲಿಯಬೇಕಾಗಿದೆ ಮತ್ತು ತಾವು ಕಲ್ಪಿಸುತ್ತಿರುವ ಮತ್ತು ಪಾಲಿಸುತ್ತಿರುವ ಜಾತ್ಯತೀತತೆಯ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ ತರಲು ತಮ್ಮನ್ನು ಸ್ವಯಂ ಸಿದ್ಧಪಡಿಸಿಕೊಳ್ಳಬೇಕಾಗಿದೆ.

- Advertisement -

ಹಿಂದುತ್ವ ದಾಳಿಗಳಿಂದ ನಮ್ಮ ದೇಶ ಮತ್ತು ಅದರ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಅವರು ಈಗಲಾದರೂ ಅರ್ಥಪೂರ್ಣ ನಿಲುವನ್ನು ತಾಳಬೇಕಾಗಿದೆ ಎಂದು ಒ.ಎಂ.ಎ.ಸಲಾಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp