ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ: ಆರೋಪಿಗಳೊಂದಿಗೆ ಸಂಚುಕೋರರನ್ನೂ ಕೂಡಲೇ ಬಂಧಿಸಲು ಎಸ್‌ಡಿಪಿಐ ಆಗ್ರಹ

Prasthutha|

ಸುಳ್ಯ: ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಸಂಚುಕೋರರನ್ನೂ ಕೂಡಲೇ ಬಂಧಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸುಳ್ಯ ವಿಧಾನಸಭಾ ಕ್ಷೇತ್ರ‌ ಸಮಿತಿ ಕಾರ್ಯದರ್ಶಿ ರಫೀಕ್ ಎಂ.ಎ ಆಗ್ರಹಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನನ್ನು ಸಂಘಪರಿವಾರದ ದುಷ್ಕರ್ಮಿಗಳು ಕಪೋಲಕಲ್ಪಿತ ಲವ್ ಜಿಹಾದ್ ವಿಚಾರವನ್ನು ಮುಂದಿಟ್ಟುಕೊಂಡು ಮಾರಣಾಂತಿಕವಾಗಿ ಗುಂಪು ಹಲ್ಲೆ ಮಾಡಿ ಕೊಲೆಯತ್ನ ನಡೆಸಿದ ಘಟನೆ ಖಂಡನಾರ್ಹ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಯುವತಿಯೊಂದಿಗೆ ತಿರುಗಾಟ ನಡೆಸಿದ್ದಾನೆ ಎಂಬ ಕಾರಣ ಇಟ್ಟುಕೊಂಡು ಯು.ಪಿ ಮಾದರಿಯಂತೆ ಸಂಘಪರಿವಾರದ ಭಯೋತ್ಪಾದಕರು ಮನಬಂದಂತೆ ಮಾರಣಾಂತಿಕವಾಗಿ ಥಳಿಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆಯು ಅತ್ಯಂತ ಖಂಡನೀಯ. ಅದಲ್ಲದೇ ಇದೊಂದು ಪೂರ್ವ ಯೋಜಿತ ಕೃತ್ಯವಾಗಿದ್ದು ಇವರ ಸಾಮಾಜಿಕ ಜಾಲತಾಣದಲ್ಲಿ ಇರುವ ಒಡನಾಟ ಅರಿತ ಹುಡುಗಿಯ ಕುಟುಂಬಸ್ಥರು ಸಂಘಪರಿವಾರದವರನ್ನು ಸೇರಿಸಿ ಹುಡುಗಿಯ ಮೂಲಕ ಸುಬ್ರಹ್ಮಣ್ಯಕ್ಕೆ ಕರೆಸಿ ಕೊಲೆಗೈಯ್ಯಲು ಯತ್ನಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ‌. ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ಈತ ತಿರುಗಾಟ ನಡೆಸಿದ್ದರೆ, ಪೋಲೀಸರು ಅದಕ್ಕಿರುವ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿತ್ತು.ಅದು ಬಿಟ್ಟು ಸಂಘಪರಿವಾರದ ಭಯೋತ್ಪಾದಕರಿಗೆ ಹಲ್ಲೆ ನಡೆಸಲು ಅನುಮತಿ ನೀಡಿದವರು ಯಾರು? ಒಂದು ವೇಳೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು ಸಂಘಪರಿವಾರವಾದರೆ ಇಲ್ಲಿ ಪೋಲಿಸ್,ನ್ಯಾಯಾಲಯ, ಕಛೇರಿ ಗಳು ಯಾಕೆ? ಎಂದು ರಫೀಕ್ ಪ್ರಶ್ನಿಸಿದ್ದಾರೆ.

- Advertisement -

ದ.ಕ ಪೋಲಿಸ್ ಇಲಾಖೆ ಸಂಘಪರಿವಾರ ಭಯೋತ್ಪಾದಕರ ಅಟ್ಟಹಾಸವನ್ನು ತಡೆಯಲು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಇಂತಹ ಅನೈತಿಕ ಗೂಂಡಾಗಿರಿಯೇ ಉದಾಹರಣೆಯಾಗಿದೆ. ಅದಲ್ಲದೇ ಇದೊಂದು ಬಿಜೆಪಿಯ ಚುನಾವಣಾ ಪೂರ್ವ ತಯಾರಿ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಎಸ್‌ಡಿಪಿಐ ನಿಯೋಗ ಹಲವಾರು ಬಾರಿ ಉನ್ನತ ಪೋಲಿಸ್ ಅಧಿಕಾರಿಗಳನ್ನು ಬೇಟಿ ಮಾಡಿದೆ, ಪತ್ರಿಕಾಗೋಷ್ಠಿಯನ್ನೂ ನಡೆಸಿದೆ. ಅದಲ್ಲದೇ ಹಲವು ಬಾರಿ ಪ್ರತಿಭಟನೆ ನಡೆಸಿ ಪೋಲಿಸ್ ಇಲಾಖೆಯನ್ನು ಎಚ್ಚರಿಸುವ ಕೆಲಸವನ್ನು ಮಾಡಿತ್ತು. ಆದರೆ ಪೋಲಿಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಸುರತ್ಕಲ್ ಜಲೀಲ್ ಹತ್ಯೆಯಾಗಿದೆ. ಇದು ಹೀಗೆ ಮುಂದುವರಿದರೆ ಇನ್ನು ಮುಂದಕ್ಕೆ ಯಾರ ಕೊಲೆ ನಡೆಯಲಿದೆಯೋ ಎಂಬ ಭಯ ಅಲ್ಪಸಂಖ್ಯಾತ ಸಮುದಾಯವನ್ನು ಆವರಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾದರೆ ಅಲ್ಪಸಂಖ್ಯಾತ ಸಮುದಾಯ ನ್ಯಾಯಕ್ಕಾಗಿ ಯಾರ ಬಳಿ ತೆರಳಬೇಕು? ಅಥವಾ ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಯನ್ನು ಅವರೆ ಮಾಡಬೇಕಾದ ರೀತಿಯಲ್ಲಿಯೇ ಮಾಡಬೇಕಾ ಎಂಬುದನ್ನು ಪೋಲಿಸ್ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಕೊಲೆ ಯತ್ನ ನಡೆಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಟ್ಟು ಕೌಂಟರ್ ಕೇಸ್ ಗಾಗಿ ಸಂತ್ರಸ್ತನ ವಿರುದ್ಧವೇ ಫೋಕ್ಸೋ ಕೇಸ್ ದಾಖಲು ಮಾಡಲಾಗಿದೆ. ಈ ಹಿಂದೆ ನಡೆದ ಇಂತಹ ಎಲ್ಲಾ ಅನೈತಿಕ ಗೂಂಡಾಗಿರಿಯ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಇಂತಹದೆ ಕೇಸ್ ದಾಖಲಿಸಿ ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸಿದೆ ಎಂದು ರಫೀಕ್ ಎಂ.ಎ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಲಿಸ್ ಉನ್ನತಾಧಿಕಾರಿಗಳು ಇಂತಹ ಅನೈತಿಕ ಗೂಂಡಾಗಿರಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕೌಂಟರ್ ಕೇಸ್ ಗಾಗಿ ಅಮಯಕರು ಬಲಿಪಶುವಾಗದಂತೆ ಮತ್ತು ಈ ರೀತಿಯ ಗುಂಪು ಹಲ್ಲೆ ನಂತರ ಸಂತ್ರಸ್ತರ ವಿರುದ್ಧವೇ ಕೇಸ್ ಆಗ್ತಾ ಇದೆ. ಹಾಗಾಗಿ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟ. ಹಾಗಾಗಿ ಇದರ ಹಿಂದಿನ ಸಂಚುಕೋರರನ್ನು ಮತ್ತು ಸೂತ್ರದಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ

Join Whatsapp