ಕಾರವಾನ್ ವರದಿಗಾರನ ಮೇಲೆ ಪೊಲೀಸ್ ದೌರ್ಜನ್ಯ

Prasthutha News

ಹೊಸದಿಲ್ಲಿ: 14ರ ಹರೆಯದ ಹುಡುಗಿಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವರದಿ ಮಾಡುತ್ತಿದ್ದ ‘ದಿ ಕಾರವಾನ್’ ಮ್ಯಾಗಝಿನ್ ನ ಪತ್ರಕರ್ತನ ಮೇಲೆ ಉತ್ತರ ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹಲ್ಲೆ ನಡೆಸಿದ್ದು, ನಾಲ್ಕು ಗಂಟೆಗಳ ಕಾಲ ಬಂಧನದಲ್ಲಿಟ್ಟ ಘಟನೆ ವರದಿಯಾಗಿದೆ.

“ದಿ ಕಾರವಾನ್”ನ ಸಿಬ್ಬಂದಿ ಅಹಾನ್ ಪೆಂಕರ್ ಮೇಲೆ ಇಂದು (ಶುಕ್ರವಾರ) ದಿಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ” ಎಂದು ಮ್ಯಾಗಝಿನ್ ಟ್ವೀಟ್ ಮಾಡಿದೆ. ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಜಯ್ ಕುಮಾರ್, ಮೋಡೇಲ್ ಟನ್ ಆವರಣದಲ್ಲಿ ಪೆಂಕರ್ ನನ್ನು ತುಳಿದಿದ್ದಾರೆ ಮತ್ತು ಕೆನ್ನೆಗೆ ಬಾರಿಸಿದ್ದಾರೆ. ಪೆಂಕರ್ ತಾನು ಪತ್ರಕರ್ತನೆಂದು ಪದೇ ಪದೇ ಹೇಳಿದ್ದ ಮತ್ತು ತನ್ನ ಐಡಿಯನ್ನು ತೋರಿಸಿದ್ದ” ಎಂದು ದಿ ಕಾರವಾನ್ ಹೇಳಿದೆ.

ಪೆಂಕರ್ ಉತ್ತರ ದಿಲ್ಲಿಯಲ್ಲಿ ಹದಿಹರೆಯದ ಹುಡುಗಿಯೋರ್ವಳ ಮೇಲಾದ ಅತ್ಯಾಚಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದರು. ಎಫ್.ಐ.ಆರ್ ನಲ್ಲಿ ಅತ್ಯಾಚಾರ ನಡೆದಿರುವುದನ್ನು ದಾಖಲಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸುತ್ತಿದ್ದರು. ತಾನು ಹುಡುಗಿಯ ಸೋದರತ್ತೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಹಿಡಿದು ಠಾಣೆಯ ಒಳಗಡೆ ಕೊಂಡೊಯ್ಯಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ತಾನು ವರದಿಗಾರನೆಂದು ಗುರುತು  ಚೀಟಿ ತೋರಿಸಿದರೂ ಬಿಡದ ಪೊಲೀಸರು ತನ್ನ ಮೊಬೈಲ್ ಕಿತ್ತು ಎಲ್ಲಾ ವೀಡಿಯೋ ವರದಿಗಳನ್ನು ಡಿಲೀಟ್ ಮಾಡಿದರು ಎಂದು ಪೆಂಕರ್ ಹೇಳಿದ್ದಾರೆ.


Prasthutha News