ಧರ್ಮಸ್ಥಳದಲ್ಲಿ ದಲಿತ ದಿನೇಶ್ ಹತ್ಯೆ: ನ್ಯಾಯಕ್ಕಾಗಿ ಆಗ್ರಹಿಸಿ ಎಸ್ ಡಿ ಪಿ ಐ ಪಾದಯಾತ್ರೆ

Prasthutha|

ಮಾರ್ಚ್ 15ರಂದು ಬೆಳ್ತಂಗಡಿಯಿಂದ ಪಾದಯಾತ್ರೆ ಆರಂಭ. ಮಾರ್ಚ್ 17ರಂದು ಡಿಸಿ ಕಚೇರಿಯಲ್ಲಿ ಸಮಾಪ್ತಿ

- Advertisement -

ಮಂಗಳೂರು: ಧರ್ಮಸ್ಥಳದಲ್ಲಿ ಬಜರಂಗದಳದ ಕಾರ್ಯಕರ್ತನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕನ್ಯಾಡಿ ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಇದೇ ಮಾರ್ಚ್ 15,16,17ರಂದು ಬೆಳ್ತಂಗಡಿಯಿಂದ ಮಂಗಳೂರು ಡಿಸಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.

ಮಾರ್ಚ್ 15ರಂದು ಬೆಳ್ತಂಗಡಿಯಿಂದ ಆರಂಭವಾಗಲಿರುವ SDPI ಪಾದಯಾತ್ರೆ ಮಾರ್ಚ್ 17ರಂದು ಮಂಗಳೂರಿನ ಡಿಸಿ ಕಚೇರಿ ಬಳಿ ಸಮಾಪ್ತಿಗೊಳ್ಳಲಿದೆ. ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಹಾಗೂ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಪಾದಯಾತ್ರೆಯಲ್ಲಿ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ ಎಂದು ಎಸ್ ಡಿ ಪಿ ಐ ಜಿಲ್ಲಾ ಸಮಿತಿ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

ಕಳೆದ ಫೆಬ್ರವರಿ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಲ್ಲಿ ದಿನೇಶ್ ಕನ್ಯಾಡಿ ಎಂಬ ದಲಿತ ಯುವಕನ ಹತ್ಯೆ ನಡೆದಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಆಪ್ತರಾಗಿರುವ ಬಜರಂಗದಳದ ಕಾರ್ಯಕರ್ತ ಕೃಷ್ಣ. ಡಿ ಎಂಬಾತ ದಿನೇಶ್ ಮೇಲೆ ಹಲ್ಲೆ ನಡೆಸಿದ್ದರು. ದಿನೇಶ್ ಮೇಲೆ ಕೃಷ್ಣ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ದಿನೇಶ್ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದರು. ಆರೋಪಿ ಕೃಷ್ಣ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಎಸ್ ಡಿ ಪಿ ಐ ಪಕ್ಷ ಪಾದಯಾತ್ರೆ ಹಮ್ಮಿಕೊಂಡಿದೆ.

ಈ ಪ್ರಕರಣದ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿರುವ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಕೊಲೆಯಾದ ದಿನೇಶ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ದಿನೇಶ್ ಕುಟುಂಬಕ್ಕೆ 2 ಎಕರೆ ಜಮೀನು ಕೊಟ್ಟು ಸರ್ಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ದಿನೇಶ್ ಮನೆಗೆ ಸ್ಥಳೀಯ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ಕೊಟ್ಟಿಲ್ಲ, ಸಮಾಜ ಕಲ್ಯಾಣ ಇಲಾಖೆಯ ಪರಿಹಾರ ಬಿಟ್ಟರೆ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಕೊಲೆಯಾದ ಕ್ರಿಮಿನಲ್ ಹಿನ್ನಲೆಯ ಹರ್ಷನ ಕುಟುಂಬಕ್ಕೆ ಪರಿಹಾರ ಕೊಟ್ಟಿರುವ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ಕೊಲೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ಕೊಡದೆ ತಾರತಮ್ಯ ನೀತಿ ಅನುಸರಿಸಿದೆ ಎಂದು ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಗತ್ಯ ಸಂದರ್ಭದಲ್ಲಷ್ಟೇ ನೀಡುವ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವನ್ನು ಕೊಲೆಯಾದ ರೌಡಿ ಹಿನ್ನಲೆಯ ಹರ್ಷನ ಕುಟುಂಬಕ್ಕೆ ಕೊಟ್ಟಿರುವುದು ಸಿಎಂ ನಿಧಿಯ ದುರ್ಬಳಕೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ ಡಿ ಪಿ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಹಾಜರಿದ್ದರು. ಸುದ್ದಿಗೊಷ್ಠಿಯಲ್ಲಿ ಹಾಜರಿದ್ದ ಎಸ್ ಡಿ ಪಿ ಐ ಜಿಲ್ಲಾ ನಾಯಕರು ಪಾದಯಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿದರು.



Join Whatsapp