ಗುವಾಹಟಿ: ಮೇ ತಿಂಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಜನರ ಮನೆಗಳನ್ನು ಕೆಡವಿದ್ದು ತಪ್ಪು ಎಂದು ಹೇಳಿರುವ ಗುವಾಹಟಿ ಉಚ್ಚ ನ್ಯಾಯಾಲಯವು ಈ ಬುಲ್ಡೊಜಿಂಗ್ ಕತೆಗಳನ್ನೆಲ್ಲ ಬಾಲಿವುಡ್ ನಿರ್ಮಾಪಕರಿಗೆ ಕಳುಹಿಸಿ ಎಂದು ಸರಕಾರದ ಪರ ವಕೀಲರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮನೆ ಕೆಡವುವ ವಿಧಿ ಯಾವ ಕ್ರಿಮಿನಲ್ ದಂಡ ಸಂಹಿತೆಯಲ್ಲಿ ಇದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಸರಿಯಾದ ಮಾಹಿತಿಯನ್ನು ಕೂಡಲೇ ಒದಗಿಸಿ, ಇಲ್ಲವೇ ಒಡೆದ ಮನೆಗಳನ್ನು ಸಂತ್ರಸ್ತರಿಗೆ ಕಟ್ಟಿಸಿ ಕೊಡಿ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.
ಕಸ್ಟಡಿ ಸಾವು ವಿರೋಧಿಸಿ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸುತ್ತಿದ್ದವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಎಂದು ಆರೋಪಿಸಿ ಅಸ್ಸಾಂ ಸರಕಾರವು ಐದಾರು ಮನೆಗಳನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಿತ್ತು.
ಅಸ್ಸಾಮಿನ ನಾಗೋನ್ ಜಿಲ್ಲೆಯ ಸಲೋನಾಬಾರಿ ಪ್ರದೇಶದಲ್ಲಿ ಈ ಮನೆ ಧ್ವಂಸಗೊಳಿಸಲಾಗಿತ್ತು. ಮಾಧ್ಯಮ ವರದಿಯಂತೆ ಐದು ಮನೆಗಳು ಮತ್ತು ಸ್ಥಳೀಯರ ಪ್ರಕಾರ ಆರು ಮನೆಗಳು ಧ್ವಂಸಗೊಳಿಸಲಾಗಿದೆ.
ದಿಲ್ಲಿಯ ಜಹಾಂಗೀರ್ ಪುರಿ, ಶಾಹೀನ್ ಬಾಗ್, ಮಧ್ಯ ಪ್ರದೇಶದ ಖರ್ಗೋನ್, ಗುಜರಾತಿನ ಆನಂದ್ ಮತ್ತು ಉತ್ತರ ಪ್ರದೇಶದ ಹಲವು ಕಡೆ ಇಂಥ ಬುಲ್ಡೋಜಿಂಗ್ ನಡೆದ ಬೆನ್ನಿಗೆ ಅಸ್ಸಾಮಿನಲ್ಲಿ ಸಹ ಇದು ನಡೆದಿತ್ತು.
ಕಸ್ಟಡಿ ಸಾವು
ಸ್ಥಳೀಯ ಮೀನು ವ್ಯಾಪಾರಿಯೊಬ್ಬರ ಕಸ್ಟಡಿ ಸಾವು ಮೇ ಕೊನೆಯ ವಾರದಲ್ಲಿ ನಡೆದಿತ್ತು. ಬಟದ್ರವ ಪೊಲೀಸ್ ಠಾಣೆಯೆದುರು 40ರಷ್ಟು ಜನರು ಸೇರಿ ಕಸ್ಟಡಿ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.
ಸಾವಿಗೀಡಾದ ಸಫೀಕುಲ್ ಇಸ್ಲಾಂ ಅವರ ಬಿಡುಗಡೆಗೆ ಪೊಲೀಸರು 10,000 ರೂ. ಮತ್ತು ಒಂದು ಬಾತುಕೋಳಿ ಲಂಚ ಕೇಳಿದ್ದರು ಎಂದು ಪ್ರತಿಭಟನಕಾರರು ಆರೋಪ ಮಾಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಶಫೀಕುಲ್’ನನ್ನು ಮರು ದಿನ ಬೆಳಗ್ಗೆ ಆಸ್ಪತ್ರೆಗೆ ಸಾಗಿಸುವಾಗ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಆತನನ್ನು ನಾವು ಬಿಡುಗಡೆ ಮಾಡಿದ್ದೆವು. ಆದರೆ ಕಾಯಿಲೆ ಇದ್ದುದರಿಂದ ಆಸ್ಪತ್ರೆಗೆ ಸಾಗಿಸುವ ಏರ್ಪಾಟು ಮಾಡಲಾಯಿತು ಎಂದು ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಹೇಳಿಕೆ ನೀಡಿದ್ದರು.
ಸಾಯಂಕಾಲವೇ ಗುಂಪು ಪೊಲೀಸ್ ಠಾಣೆಯೆದುರು ಪ್ರತಿಭಟಿಸಿತು. ಕೆಲವರು ಠಾಣೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿದರು. ನಾಗೋನ್ ಜಿಲ್ಲಾಡಳಿತವು ಬಟದ್ರವ ಸದರಿ ಅಧಿಕಾರಿಯನ್ನು ಅಮಾನತು ಮಾಡಿ ಸಾವಿನ ತನಿಖೆಗೆ ಆದೇಶಿಸಿತ್ತು.
ಪೊಲೀಸರ ತಪ್ಪಿಲ್ಲ. ನಾವು ಕಾನೂನು ಪ್ರಕಾರ ನಡೆದುಕೊಂಡಿದ್ದೇವೆ ಎಂದು ಡಿಜಿಪಿ ಹೇಳಿದ್ದರು.
ಒಬ್ಬ ಮಹಿಳೆ ಮತ್ತು ಒಬ್ಬ ಅಪ್ರಾಪ್ತನ ಸಹಿತ ಗಲಭೆಕೋರರು ಎಂದು ಪೊಲೀಸರು 15 ಜನರನ್ನು ಬಂಧಿಸಿದ್ದರು. ಠಾಣೆಗೆ ಬೆಂಕಿ ಹಚ್ಚಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು.
ಠಾಣೆಯಲ್ಲಿ ಮೃತ ಶಫೀಕುಲ್ ಸಹಿತ ಅವರ ಸಂಬಂಧಿಕರ ಆರು ಮನೆಗಳನ್ನು ಜಿಲ್ಲಾಡಳಿತವು ಅಂದೇ ಬುಲ್ಡೋಜರ್ ಹರಿಸಿ ಉರುಳಿಸಿತ್ತು. ಶನಿವಾರ ಪ್ರತಿಭಟನೆ ನಡೆಸಿದ್ದವರ ಮನೆಯನ್ನು ಭಾನುವಾರ ಧ್ವಂಸಗೊಳಿಸಲಾಗಿತ್ತು.
ಒಂದೇ ದಿನದಲ್ಲಿ ಈ ಕೆಲಸ ಆಗಿದ್ದರೂ ಮನೆ ಕೆಡವುವ ನೋಟಿಸ್ ನೀಡಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿತ್ತು. ಕೋರ್ಟಿನಲ್ಲಿ ಸಂತ್ರಸ್ತರನ್ನು ಸರಕಾರಿ ವಕೀಲರು ಭಾರತೀಯ ಮುಜಾಹಿದೀನ್ನರು ಎಂದು ಕರೆದುದು ಭಾರೀ ವಿವಾದವಾಗಿತ್ತು.
ಈಗಿನ ಡಿಜಿಪಿ ಮಹಂತ ಅವರು ಈ ಘಟನೆ ಕಾನೂನುಬದ್ಧವಾಗಿಯೇ ನಡೆದಿದೆ ಎಂದಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡುವಂತೆ ನ್ಯಾಯಾಲಯ ಹೇಳಿದೆ.