ಅಸ್ಸಾಂ | ಬುಲ್ಡೋಜರ್ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಮುಸ್ಲಿಮರು ಮೃತ್ಯು

Prasthutha|

ಗುವಾಹಟಿ: ಜಿಲ್ಲಾಡಳಿತದ ಬುಲ್ಡೋಜರ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಮನಬಂದಂತೆ ಗುಂಡು ಹಾರಿಸಿದ್ದು ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಅಸ್ಸಾಂನ ಗುವಾಹಟಿಯ ಹೊರವಲಯದಲ್ಲಿರುವ ಸೋನ್‌ಪುರದ ಕೊಸುಟೋಲಿಯಲ್ಲಿ ನಡೆದಿದೆ.

- Advertisement -

ಮೃತಪಟ್ಟವರನ್ನು ಹೈದರ್ ಅಲಿ ಮತ್ತು ಜುವಾಹಿದ್ ಅಲಿ ಎಂದು ಗುರುತಿಸಲಾಗಿದೆ. ಈ ಘಟನೆ ಬಳಿಕ ಸ್ಥಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸರ್ಕಾರ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೆಲವು ದಿನಗಳಿಂದ ಇಲ್ಲಿ ಬುಲ್ಡೋಜರ್ ಹರಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಗುರುವಾರ ಜಿಲ್ಲಾಡಳಿತ ಸೂಚನೆ ಮೇರೆಗೆ ಮನೆ ಕೆಡವಲು ಬುಲ್ಡೋಜರ್‌ ಬಂದಾಗ ಸ್ಥಳೀಯ ಜನರು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮನೆಯನ್ನು ಉಳಿಸಿಕೊಳ್ಳಲು ಜನರು ಬುಲ್ಡೋಜರ್‌ಗೆ ಅಡ್ಡ ನಿಂತಿದ್ದಾರೆ. ಜನರು ಉದ್ರಿಕ್ತಗೊಂಡಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

- Advertisement -

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ನಿರಂತರವಾಗಿ ಮುಸ್ಲಿಮರ ಮನೆ, ಅಂಗಡಿ, ಮಸೀದಿ, ಮದರಸಾಗಳನ್ನು ಗುರಿಯಾಗಿಸಿಕೊಂಡು ಧ್ವಂಸ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಗುವಾಹಟಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಒಂದು ಪ್ರಕರಣದಲ್ಲಿ, ಗುವಾಹಟಿ ಹೈಕೋರ್ಟ್ ಆರೋಪಿಯ ಮನೆಯನ್ನು ಕೆಡವಿದ ನಂತರ ಸರ್ಕಾರಕ್ಕೆ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಹೀಗಿದ್ದರೂ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಬಿಜೆಪಿ ಆಡಳಿತವಿರುವ ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳನ್ನು ಸರಕಾರಗಳು ಯಾವುದೇ ಆರೋಪಿಗಳಾಗುತ್ತಿದ್ದಂತೆಯೇ ಅವರ ಮನೆಗಳನ್ನು ಕೆಡವುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp