ಗುವಾಹಟಿ: ಅಸ್ಸಾಂನ ಲಖಿಂಪುರ ಜಿಲ್ಲೆಯ ನವೊಬೋಚಾ ಕಾಂಗ್ರೆಸ್ ಶಾಸಕ ಭರತ್ ಚಂದ್ರ ನಾರಾ ಅವರು ತಮ್ಮ ಪತ್ನಿ ಲೋಕಸಭೆ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಪಡೆಯಲು ವಿಫಲವಾದ ಕಾರಣ ಸೋಮವಾರ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ.
ಲಖಿಂಪುರ ಲೋಕಸಭಾ ಕ್ಷೇತ್ರಕ್ಕೆ ಉದಯ್ ಶಂಕರ್ ಹಜಾರಿಕಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ನಾರಾ ಅವರು ತಮ್ಮ ಪತ್ನಿ ಹಾಗೂ ಮಾಜಿ ಕೇಂದ್ರ ಸಚಿವೆ ರಾನೀ ನಾರಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಭರವಸೆ ಹೊಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಗಿದೆ.
“ನಾನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಶಾಸಕ ಭರತ್ ಚಂದ್ರ ನಾರಾ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಒಂದು ಸಾಲಿನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.