ಗುವಾಹಟಿ: ಮೀನು ವ್ಯಾಪಾರಿ ಶಫೀಕ್ ಉಲ್ ಇಸ್ಲಾಮ್ ಎಂಬವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬಟಾದ್ರಬಾ ಠಾಣೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಅಸ್ಸಾಮ್ ನ ನಾಗಾಂವ್ ಜಿಲ್ಲಾಡಳಿತ ಮೃತನ ಮನೆ ಒಳಗೊಂಡಂತೆ ಹಲವಾರು ಮುಸ್ಲಿಮರ ಮನೆಗಳನ್ನು ಭಾನುವಾರ ಧ್ವಂಸಗೊಳಿಸಿದೆ.
ನಾಗಾಂವ್ ಜಿಲ್ಲಾಡಳಿತವು ಪೊಲೀಸರೊಂದಿಗೆ ಸೇರಿಕೊಂಡು ಸುಮಾರು ಏಳು ಮನೆಗಳನ್ನು ಧ್ವಂಸಗೊಳಿಸಿದೆ ಎಂದು ಸಲ್ನಾಬರಿ ನಿವಾಸಿಗಳು ದೂರಿದ್ದಾರೆ.
ತೆರವು ಕಾರ್ಯಾಚರಣೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡಿರಲಿಲ್ಲ ಮತ್ತು ಜನರು ಆ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲಾಯಿತು ಎಂದು ಸ್ಥಳೀಯರು ದೂರಿದ್ದಾರೆ.
ಶಫೀಕ್ ಉಲ್ ಇಸ್ಲಾಮ್ ಅವರು ಶುಕ್ರವಾರ ಸಂಜೆ ಶಿವಸಾಗರ್ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅಸ್ಸಾಮ್ ಪೊಲೀಸರು ಅವರನ್ನು ಬಂಧಿಸಿದ್ದರು.
ಆತನನ್ನು ಬಿಡುಗಡೆಗೊಳಿಸಲು ಪೊಲೀಸರು 10,000 ರೂ. ಮತ್ತು ಬಾತುಕೋಳಿಯನ್ನು ಲಂಚವಾಗಿ ನೀಡುವಂತೆ ಬಲವಂತಪಡಿಸಿದ್ದಾರೆ ಎಂದು ಶಫೀಕ್ ಕುಟುಂಬ ಮಾಧ್ಯಮಗಳಿಗೆ ತಿಳಿಸಿದೆ. ನಾವು ಬಾತುಕೋಳಿಯನ್ನು ಮಾತ್ರ ನೀಡಲು ಶಕ್ತರಾಗಿದ್ದು, ಆತನನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೆವು. ಆದರೆ ಪೊಲೀಸರು ಆತನನ್ನು ಕೊಂದು ಹಾಕಿದ್ದಾರೆ ಎಂದು ಆತನ ಪತ್ನಿ ತಿಳಿಸಿದ್ದಾರೆ.
ಈ ಮಧ್ಯೆ ಶಫೀಕ್ ಉಲ್ ಇಸ್ಲಾಮ್ ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಠಾಣೆಯ ಮೇಲೆ ದಾಳಿ ಮಾಡಿದರು ಮತ್ತು ಬೆಂಕಿ ಹಚ್ಚುವ ಮೊದಲು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದಾಗಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಹಿರಿಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.