ಏಷ್ಯನ್ ಗೇಮ್ಸ್​: ಬರೋಬ್ಬರಿ 16 ಗೋಲು ಬಾರಿಸಿ ಅಮೋಘ ಗೆಲುವು ದಾಖಲಿಸಿದ ಭಾರತ

Prasthutha|

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಶುಭಾರಂಭ ಮಾಡಿದೆ.

- Advertisement -

ಉಜ್ಬೇಕಿಸ್ತಾನ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 16-0 ಅಂತರದಿಂದ ಆಮೋಘ ಗೆಲುವು ದಾಖಲಿಸಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ ಸಾಗಿದ್ದ ಈ ಪಂದ್ಯದಲ್ಲಿ ಭಾರತ ತಂಡದ ಮೂವರು ಆಟಗಾರರು ಹ್ಯಾಟ್ರಿಕ್ ಸಾಧನೆ ಮಾಡಿದ್ದು ವಿಶೇಷ. ಪಂದ್ಯದ 7ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿ ಲಲಿತ್ ಉಪಾಧ್ಯಾಯ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇನ್ನು 12ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಬಾರಿಸಿದರೆ, 17ನೇ ನಿಮಿಷದಲ್ಲಿ ಅಭಿಷೇಕ್ ಚೆಂಡನ್ನು ಗುರಿ ಮುಟ್ಟಿಸಿದರು. ಮೊದಲ 17 ನಿಮಿಷದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತೀಯ ಆಟಗಾರರು ಆ ಬಳಿಕ ಗೋಲಿನ ಸುರಿಮಳೆಗೈದರು.

ಮೂವರ ಹ್ಯಾಟ್ರಿಕ್ ಸಾಧನೆ:

- Advertisement -

ಈ ಪಂದ್ಯದಲ್ಲಿ ಭಾರತದ ಪರ ಲಲಿತ್ ಉಪಾಧ್ಯಾಯ (7, 24, 37 ಮತ್ತು 53), ಮಂದೀಪ್ ಸಿಂಗ್ (18, 27 ಮತ್ತು 28) ಮತ್ತು ವರುಣ್ ಕುಮಾರ್ (12, 36, 50 ಮತ್ತು 52) ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದರು.

ಇನ್ನು ಅಭಿಷೇಕ್ (17), ಸುಖಜಿತ್ ಸಿಂಗ್ (42), ಶಂಶೇರ್ ಸಿಂಗ್ (43), ಅಮಿತ್ ರೋಹಿದಾಸ್ (38) ಮತ್ತು ಸಂಜಯ್ (57) ತಲಾ ಒಂದೊಂದು ಗೋಲು ಗಳಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ಗೋಲುಗಳ ಸಂಖ್ಯೆ 16 ಕ್ಕೇರಿತು.

ಅಲ್ಲದೆ ತನ್ನ ಮೊದಲ ಪಂದ್ಯದಲ್ಲೇ 16-0 ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಶುಭಾರಂಭ ಮಾಡಿದೆ.

ಸದ್ಯ ವಿಶ್ವ ಹಾಕಿ ಶ್ರೇಯಾಂಕದಲ್ಲಿ 68ನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಸೆಪ್ಟೆಂಬರ್ 26 ರಂದು ಸಿಂಗಾಪುರ ತಂಡವನ್ನು ಎದುರಿಸಲಿದೆ.

ಪದಕ ಪಟ್ಟಿಯಲ್ಲಿ 3ನೇ ಸ್ಥಾನ:

ಭಾರತವು ಪ್ರಸ್ತುತ ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಇಲ್ಲಿಯವರೆಗೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 3 ಬೆಳ್ಳಿ ಪದಕಗಳು ಮತ್ತು 2 ಕಂಚಿನ ಪದಕಗಳು ಸೇರಿವೆ.

ಭಾರತೀಯ ಆಟಗಾರರು ಇಲ್ಲಿಯವರೆಗೆ ರೋಯಿಂಗ್ ಮತ್ತು ಶೂಟಿಂಗ್‌ನಲ್ಲಿ ಮಾತ್ರ ಪದಕಗಳನ್ನು ಗೆದ್ದಿದ್ದು, ಇದಾಗ್ಯೂ ಭಾರತ ತಂಡದ ಚಿನ್ನದ ಪದಕದ ಖಾತೆ ತೆರೆದಿಲ್ಲ. ಮತ್ತೊಂದೆಡೆ ಆತಿಥೇಯ ಚೀನಾ ಒಟ್ಟು 14 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Join Whatsapp