ಬ್ಯಾಂಕಾಕ್: ಜುಲೈ 12 ರಿಂದ 16 ರವರೆಗೆ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿರುವ ಸುಪಾಚಲ್ಸೈ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 25 ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಥ್ಲಿಟ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ.
ಈ ಬಾರಿ ಕ್ರೀಡಾಕೂಟದಲ್ಲಿ ಭಾರತ ಪರ 6 ಚಿನ್ನ, 12 ಬೆಳ್ಳಿ, 9 ಕಂಚಿನ ಪದಕಗಳಿಗೆ ಮುತ್ತಿಟ್ಟ ಅಥ್ಲಿಟ್ಗಳು ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ತಂದುಕೊಟ್ಟಿದ್ದಾರೆ. ಈ ವರ್ಷ ಜಪಾನ್ 16 ಚಿನ್ನ, 11 ಬೆಳ್ಳಿ ಮತ್ತು 10 ಕಂಚಿನ ಪದಕ ಸೇರಿದಂತೆ ಒಟ್ಟು 37 ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಚೀನಾ 8 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗೆದ್ದು 2ನೇ ಸ್ಥಾನ ಪಡೆದುಕೊಂಡಿತು.
ಈ ಹಿಂದೆ ಅಂದರೆ 2017ರ ಆವೃತ್ತಿಯಲ್ಲಿ 9 ಚಿನ್ನ, 6 ಬೆಳ್ಳಿ ಮತ್ತು 12 ಕಂಚಿನ ಪದಕ ಗೆದ್ದಿದ್ದ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆ ಬಳಿಕ 2019ರಲ್ಲಿ ದೋಹಾದಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಎರಡು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚು ಸೇರಿದಂತೆ 16 ಪದಕಗಳನ್ನು ಗೆದ್ದಿದ್ದ ಭಾರತ, ಈ ಬಾರಿ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತಾದರೂ, ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಯಿತು.
ಬೆಳ್ಳಿ ಗೆದ್ದ ಡಿಪಿ ಮನು
ಇನ್ನು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಕರ್ನಾಟಕದ (ಹಾಸನ) ಡಿಪಿ ಮನು ಜಾವೆಲಿನ್ ಥ್ರೋ ವಿಭಾಗದಲ್ಲಿ 81.01 ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ ಅವರು ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ಗಾಗಿ ತಯಾರಿ ನಡೆಸುತ್ತಿರುವ ಕಾರಣ ಈ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದರು. ಹೀಗಾಗಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಮನು ಕೇವಲ 2 ಮೀಟರ್ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.
ಸ್ವಲ್ಪದರಲ್ಲೇ ಚಿನ್ನದ ಪದಕ ಮಿಸ್
ಭಾನುವಾರದಂದು ನಡೆದ ಜಾವೆಲಿನ್ ಥ್ರೋ ಫೈನಲ್ನಲ್ಲಿ ಮನು ವಾಸ್ತವವಾಗಿ ಮೊದಲ ಎಸೆತದ ನಂತರ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದರು. ಮೊದಲ ಸುತ್ತಿನಲ್ಲಿ 78.2 ಮೀ ದೂರ ಜಾವೆಲಿನ್ ಎಸೆದ ಮನು ಚಿನ್ನದ ಪದಕ ಸ್ಪರ್ಧೆಯಲ್ಲಿ ಮುನ್ನಡೆಯಲ್ಲಿದ್ದರು. ಎರಡನೇ ಸುತ್ತಿನಲ್ಲೂ ತಮ್ಮ ಪ್ರದರ್ಶನವನ್ನು ಸುಧಾರಿಸುವಲ್ಲಿ ಯಶಸ್ವಿಯಾದ ಮನು 79.83 ಮೀ ಎಸೆಯುವ ಮೂಲಕ ಚಿನ್ನದ ಪದಕದ ರೇಸ್ನಲ್ಲಿ 2 ಮೀಟರ್ಗಳ ಮುನ್ನಡೆ ಕಾಯ್ದುಕೊಂಡರು. ಆದಾಗ್ಯೂ, ಜಪಾನ್ನ ರೋಡೆರಿಕ್ ಜೆಂಕೆ ಡೀನ್, ಮೂರನೇ ಸುತ್ತಿನಲ್ಲಿ 83.15 ಮೀ ದೂರ ಎಸೆಯುವ ಮೂಲಕ ಮನು ಅವರಿಂದ ಚಿನ್ನದ ಪದಕವನ್ನು ಕಿತ್ತುಕೊಂಡರು.