ಏಷ್ಯಾ ಕಪ್| ಮೊದಲ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನಿಸ್ತಾನ ಮುಖಾಮುಖಿ

Prasthutha|

ಪ್ರತಿಷ್ಠಿತ ಏಷ್ಯಾ ಕಪ್‌ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ರಾತ್ರಿ 7.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ.

- Advertisement -

15ನೇ ಆವೃತ್ತಿಯ ಏಷ್ಯಾ ಕಪ್‌ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿದೆ. ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ನಡೆಯಲಿರುವುದರಿಂದ, ಈ ಬಾರಿಯ ಏಷ್ಯಾಕಪ್‌ ಮಿನಿ ವಿಶ್ವಕಪ್ ಟೂರ್ನಿಯಾಗಿ ಪರಿಣಮಿಸಿದೆ. 1984ರಲ್ಲಿ ಆರಂಭವಾದ ಏಷ್ಯಾಕಪ್ ಟೂರ್ನಿ 2014ರವರೆಗೂ ಏಕದಿನ ಮಾದರಿಯಲ್ಲಿಯೇ ನಡೆದಿತ್ತು. 2015ರಲ್ಲಿ ನಡೆದ ಏಷ್ಯಾಕಪ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾಕಪ್ ಟೂರ್ನಿಯನ್ನು ಮುಂದಿನ ದಿನಗಳಲ್ಲಿ ಒಂದು ಆವೃತ್ತಿಯಲ್ಲಿ ಟಿ20 ಮತ್ತು ಮುಂದಿನ ಆವೃತ್ತಿಯಲ್ಲಿ ಏಕದಿನ ಮಾದರಿಯಲ್ಲಿ ನಡೆಸುವ ನಿರ್ಧಾರ ಕೈಗೊಂಡಿತ್ತು. ಹೀಗಾಗಿ 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್, ಟಿ20 ಮಾದರಿಯಲ್ಲಿ, ನಂತರ ಯುಎಇಯಲ್ಲಿ ನಡೆದ 2018ರ ಏಷ್ಯಾಕಪ್, ಏಕದಿನ ಮಾದರಿಯಲ್ಲಿ ನಡೆದಿತ್ತು.

ಪೂರ್ವ ನಿಗದಿಯಂತೆ ಈ ಬಾರಿಯ ಏಷ್ಯಾಕಪ್‌ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪರಾಷ್ಟ್ರದಲ್ಲಿ ತಲೆದೋರಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಟೂರ್ನಿ ಯುಎಇಗೆ ಸ್ಥಳಾಂತರವಾಗಿದೆ. ಆಗಸ್ಟ್‌ 28ರ ಭಾನುವಾರದಂದು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿರುವ ಭಾರತ- ಪಾಕಿಸ್ತಾನ ತಂಡಗಳ ನಡುವಿನ ʻಹೈವೋಲ್ಟೇಜ್‌ʼ ಕದನ ನಡೆಯಲಿದೆ.

- Advertisement -

 ಶ್ರೀಲಂಕಾ-ಅಫ್ಘಾನಿಸ್ತಾನ ಪಂದ್ಯದ ಲೆಕ್ಕಾಚಾರ

ಏಷ್ಯಾ ಕಪ್‌ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್‌ ಆಗಿರುವ ಟೀಮ್‌ ಇಂಡಿಯಾ ಅತ್ಯಂತ ಯಶಸ್ವೀ ತಂಡ ಎನಿಸಿಕೊಂಡಿದೆ. ಐದು ಬಾರಿ ಟ್ರೋಫಿ ಗೆದ್ದಿರುವ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ. ಆದರೆ 2010ರ ಬಳಿಕ ಏಷ್ಯಾ ಕಪ್‌ನಲ್ಲಿ ಶ್ರೀಲಂಕಾ ತಂಡದ ಪ್ರದರ್ಶನ ದಯನೀಯ ಸ್ಥಿತಿ ತಲುಪಿದೆ.

ಆಲ್‌ರೌಂಡರ್‌ ದಸುನ್‌ ಶಾನಕ ಈ ಬಾರಿ ಶ್ರೀಲಂಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರಮುಖ ವೇಗಿ ದುಷ್ಮಾಂತ ಚಾಮೀರ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಮತ್ತೊಂದೆಡೆ ಟಿ20 ಲೀಗ್‌ಗಳಲ್ಲಿ ಮಿಂಚುತ್ತಿರುವ ಅಫ್ಘಾನಿಸ್ತಾನ ಆಟಗಾರರು ಲಂಕಾ ತಂಡಕ್ಕೆ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮುಹಮ್ಮದ್‌ ನಬಿ, ರಶೀದ್‌ ಖಾನ್‌ ಮತ್ತು ಹಝರತ್‌ ಉಲ್ಲಾ ಝಜಾಯ್‌ ಅವರಂತಹ ಮ್ಯಾಚ್‌ ವಿನ್ನರ್‌ಗಳ ದಂಡೇ ಅಫ್ಘಾನಿಸ್ತಾನ ತಂಡದಲ್ಲಿದೆ. ಮುಹಮ್ಮದ್‌ ನಬಿ ತಂಡವನ್ನು ಮುನ್ನಡೆಸಲಿದ್ದು, ಇದು ನಬಿ ವೃತ್ತಿ ಜೀವನದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಲಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಈವರೆಗೆ ಅಚ್ಚರಿ ಎಂಬಂತೆ ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. 2016ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಜಯ ದಾಖಲಿಸಿತ್ತು.

Join Whatsapp