ಏಷ್ಯಾ ಕಪ್‌ | ಶ್ರೀಲಂಕಾ ವಿರುದ್ಧ ರೋಹಿತ್‌ ಪಡೆಗೆ ‘ಮಾಡು ಇಲ್ಲವೇ ಮಡಿʼ ಪಂದ್ಯ

Prasthutha|

ದುಬೈ: ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ತನ್ನ ಎರಡನೇ, ʻಡೂ ಆರ್‌ ಡೈʼ ಪಂದ್ಯದಲ್ಲಿ ಟೀಮ್‌ ಇಂಡಿಯಾ ಮಂಗಳವಾರ, ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ಮೊದಲನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ರೋಹಿತ್‌ ಪಡೆ, ಏಷ್ಯಾ ಕಪ್‌ ಫೈನಲ್‌ ಆಸೆ ಜೀವಂತವಾಗಿರಿಸಲು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.

- Advertisement -

ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನವನ್ನು ಮಣಿಸಿದ್ದು, ಮಂಗಳವಾರದ ಪಂದ್ಯವನ್ನು ಗೆದ್ದರೆ ಫೈನಲ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. ಮತ್ತೊಂದೆಡೆ  ಲಂಕಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ.

ಅಂತಿಮ ಪ್ಲೇಯಿಂಗ್‌ ಆಯ್ಕೆಯಲ್ಲಿ ಗೊಂದಲ

- Advertisement -

ಲಂಕಾ ವಿರುದ್ಧ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲು ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ರೋಹಿತ್‌ ಶರ್ಮಾ ಗೊಂದಲಕ್ಕೆ ಒಳಗಾಗಿದ್ದಾರೆ. ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಐವರು ಬೌಲರ್‌ಗಳೊಂದಿಗೆ ಟೀಮ್‌ ಇಂಡಿಯಾ ಕಣಕ್ಕಿಳಿದಿತ್ತಾದರೂ, ಬೌಲಿಂಗ್‌ ವಿಭಾಗ ದುರ್ಬಲವಾಗಿತ್ತು. ರವಿ ಬಿಷ್ಣೋಯ್‌ ಹೊರತು ಪಡಿಸಿ ಉಳಿದ ಮೂವರು 40+ ರನ್‌ ನೀಡಿ ದುಬಾರಿಯಾಗಿದ್ದರು. ಪ್ರಮುಖ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಮತ್ತೊಂದೆಡೆ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಲ್‌ರೌಂಡರ್‌ ಕಾಣಸಿಗುತ್ತಿಲ್ಲ. ದೀಪಕ್‌ ಹೂಡಾ ತಂಡದಲ್ಲಿದ್ದರೂ, ಅವರಿಗೆ ಚೆಂಡು ನೀಡಲು ರೋಹಿತ್‌ ಶರ್ಮಾ ಮನಸ್ಸು ಮಾಡಿರಲಿಲ್ಲ.

ಲಂಕಾ ವಿರುದ್ಧ ಯಜುವೇಂದ್ರ ಚಹಾಲ್‌ ಬದಲು ಅಕ್ಷರ್‌ ಪಟೇಲ್‌ ಅಥವಾ ರವಿಚಂದ್ರನ್‌ ಅಶ್ವಿನ್‌ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಜ್ವರದಿಂದ ಬಳಲುತ್ತಿದ್ದ ಆವೇಶ್‌ ಖಾನ್‌ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಲಿದ್ದಾರೆ. ದೀಪಕ್‌ ಹೂಡಾ ಬದಲು ದಿನೇಶ್‌ ಕಾರ್ತಿಕ್‌ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ರೋಹಿತ್‌, ರಾಹುಲ್‌, ಕೊಹ್ಲಿ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ ಕಂಡುಕೊಳ್ಳುತ್ತಿರುವುದು ಭರವಸೆ ಮೂಡಿಸಿದೆ. ಅದಾಗಿಯೂ ದುರ್ಬಲ ಬೌಲಿಂಗ್‌ ವಿಭಾಗ ಚಿಂತೆಗೀಡುಮಾಡಿದೆ.

ಫೈನಲ್‌ ಗುರಿಯಲ್ಲಿ ಶ್ರೀಲಂಕಾ

ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿರುವ ದಾಸುನ್‌ ಶನಕ ಪಡೆ, ಭಾರತದ ವಿರುದ್ಧವೂ ಗೆಲುವಿನ ಲಯವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಆವೇಶ್‌ ಖಾನ್, ಅರ್ಷ್‌ದೀಪ್ ಸಿಂಗ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ಗುಣತಿಲಕ, ದಸುನ್ ಶನಕ‌ (ನಾಯಕ), ಭಾನುಕ ರಾಜಪಕ್ಸೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ




Join Whatsapp