ದುಬೈ: ಏಷ್ಯಾಕಪ್ ಟಿ20 ಟೂರ್ನಿಯ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಬಾಂಗ್ಲಾದೇಶ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಬಿ ಗುಂಪಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಅಫ್ಘಾನಿಸ್ತಾನಕ್ಕೆ ಶರಣಾಗಿದ್ದವು. ಈ ಹಿನ್ನಲೆಯಲ್ಲಿ ಸೂಪರ್-4 ಹಂತಕ್ಕೇರಲು ಉಭಯ ತಂಡಗಳು ಗುರುವಾರದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
ದಾಸುನ್ ಶನಕ ನೇತೃತ್ವದ ಶ್ರೀಲಂಕಾ ಮತ್ತು ಶಾಕಿಬ್ ಸಾರಥ್ಯದ ಬಾಂಗ್ಲಾದೇಶ, ಅಫ್ಘಾನಿಸ್ತಾನ ವಿರುದ್ಧದ ಆರಂಭಿಕ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಸಂಕಷ್ಟಕ್ಕೆ ಸಿಲುಕಿದ್ದವು.
ಇದೀಗ, ಟೂರ್ನಿಯಲ್ಲಿ ಉಳಿಯಲು ಎರಡೂ ತಂಡಗಳು ಯತ್ನಿಸುತ್ತಿವೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಮಬಲದ ಹೋರಾಟ ನಡೆಯುವ ಸಾಧ್ಯತೆ ಇದೆ. ಬಿ ಗುಂಪಿನಿಂದ ಈಗಾಗಲೇ ಅಫ್ಘಾನಿಸ್ತಾನ ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ಲಂಕಾ ಮತ್ತು ಬಾಂಗ್ಲಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಒಟ್ಟು 12 ಬಾರಿ ಮುಖಾಮುಖಿಯಾಗಿವೆ. 8 ಬಾರಿ ಶ್ರೀಲಂಕಾ ಗೆಲುವಿನ ನಗೆ ಬೀರಿದರೆ, 4 ಬಾರಿ ಗೆಲ್ಲುವಲ್ಲಿ ಬಾಂಗ್ಲಾ ಯಶಸ್ವಿಯಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 40 ರನ್‌ಗಳ ಅಂತರದಲ್ಲಿ ಮಣಿಸಿದ್ದ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದೆ. ಸೆಪ್ಟಂಬರ್ 2 ಶುಕ್ರವಾರದಂದು ನಡೆಯುವ ಪಾಕಿಸ್ತಾನ-ಹಾಂಕಾಂಗ್ ಪಂದ್ಯದ ವಿಜೇತರು ಎರಡನೇ ತಂಡವಾಗಿ ಸೂಪರ್-4 ಹಂತಕ್ಕೆ ಅವಕಾಶ ಪಡೆಯಲಿದ್ದಾರೆ.
ಸೆಪ್ಟಂಬರ್ 4ರಿಂದ ಸೂಪರ್-4 ಹಂತದ ಪಂದ್ಯಗಳು ನಡೆಯಲಿದ್ದು, ಸೆಪ್ಟಂಬರ್ 11ರಂದು ಫೈನಲ್ ಪಂದ್ಯ ನಡೆಯಲಿದೆ.
ಬಾಂಗ್ಲಾದೇಶ-ಶ್ರೀಲಂಕಾ ತಂಡಗಳ ವಿವರ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಅಸಲಂಕಾ, ಗುಣತಿಲಕ, ಭಾನುಕಾ ರಾಜಪಕ್ಸೆ, ವನಿಂದು ಹಸರಂಗ, ದಾಸುನ್ ಶನಕ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಪತಿರಣ, ದಿಲ್ಶನ್ ಮಧುಶಂಕ
ಬಾಂಗ್ಲಾದೇಶ: ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್, ಮುಶ್ಫಿಕುರ್ ರಹೀಮ್, ಅಫೀಫ್ ಹುಸೇನ್, ಮಹ್ಮೂದುಲ್ಲಾ, ಮೊಸದ್ದೆಕ್ ಹುಸೈನ್, ಮೆಹ್ದಿ ಹಸನ್, ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಝರ್ ರೆಹಮಾನ್