ಏಷ್ಯಾ ಕಪ್‌| ಅಪ್ಘಾನಿಸ್ತಾನ ವಿರುದ್ಧ 101 ರನ್‌ ಅಂತರದಲ್ಲಿ ಗೆದ್ದ ಟೀಮ್‌ ಇಂಡಿಯಾ

Prasthutha|

ದುಬೈ: ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಬಿಗು ಬೌಲಿಂಗ್‌ ದಾಳಿಗೆ ನಲುಗಿದ ಅಫ್ಘಾನಿಸ್ತಾನ, ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಮ್‌ ಇಂಡಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಭಾರತ ನೀಡಿದ್ದ 213 ರನ್‌ಗಳ ಕಠಿಣ ಗುರಿ ಬೆನ್ನತ್ತುವ ವೇಳೆ, ಭುವಿ ಬೌಲಿಂಗ್‌ ಸುಳಿಗೆ ಸಿಲುಕಿ ಅಫ್ಘಾನ್‌ ಪಡೆ 8 ವಿಕೆಟ್‌ ನಷ್ಟದಲ್ಲಿ 111 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಟೀಮ್‌ ಇಂಡಿಯಾ 101 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು.

- Advertisement -

4 ರನ್‌ ನೀಡಿ 5 ವಿಕೆಟ್‌ ಕಿತ್ತ ಭುವನೇಶ್ವರ್‌

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಪಡೆಯುವ ಮೂಲಕ ಭುವನೇಶ್ವರ್‌ ಕುಮಾರ್‌, ಅಫ್ಘಾನಿಸ್ತಾನಕ್ಕೆ ಆರಂಭದಲ್ಲೇ ಆಘಾತ ನೀಡಿದ್ದರು. ಒಟ್ಟು 4 ಓವರ್‌ ಎಸೆದ ಭುವಿ, ಕೇವಲ ನಾಲ್ಕು ರನ್‌ ನೀಡಿ ಒಂದು ಮೇಡನ್‌  ಸಾಧನೆಯೊಂದಿಗೆ ಐದು ಪ್ರಮುಖ ವಿಕೆಟ್‌ ಪಡೆಯುವ ಮೂಲಕ ಮಿಂಚಿದರು. ಇದು ಭುವನೇಶ್ವರ್‌ ವೃತ್ತಿಜೀವನದ ಶ್ರೇಷ್ಠ ನಿರ್ವಹಣೆಯಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ (84) ಪಡೆದ ಭಾರತೀಯ ಬೌಲರ್‌ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡರು.  

- Advertisement -

ಅಫ್ಘಾನಿಸ್ತಾದ ಪರ ಇನಿಂಗ್ಸ್‌ ಆರಂಭಿಸಿದ್ದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಹಝ್ರತುಲ್ಲಾ ಝಝಾಯ್‌ ಮತ್ತು ರಹ್ಮಾನುಲ್ಲಾ ಗುರ್ಬಾಝ್‌, ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ಇಬ್ರಾಹಿಂಝದ್ರಾನ್‌ ತಾಳ್ಮೆಯ ಬ್ಯಾಟಿಂಗ್‌ ಮೂಲಕ ಅರ್ಧಶತಕ ಗಳಿಸಿ, ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ರಶೀದ್‌ ಖಾನ್‌ 15 ರನ್‌ ಮತ್ತು ಮುಜೀಬ್‌ ಉರ್‌ ರಹ್ಮಾನ್‌ 18 ರನ್‌ ಗಳಿಸಿದರು.

ಭಾರತದ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ 5 ವಿಕೆಟ್‌ ಪಡೆದರೆ, ಅರ್ಷ್‌ದೀಪ್‌ ಸಿಂಗ್‌, ರವಿಚಂದ್ರನ್‌ ಅಶ್ವಿನ್‌ ಹಾಗೂ ದೀಪಕ್‌ ಹೂಡಾ ತಲಾ ಒಂದು ವಿಕೆಟ್‌ ಪಡೆದರು. ಅಪರೂಪವೆಂಬಂತೆ ಬೌಲಿಂಗ್‌ ವಿಭಾಗದಲ್ಲಿ ಕಾಣಿಸಿಕೊಂಡ ದಿನೇಶ್‌ ಕಾರ್ತಿಕ್‌ 1 ಓವರ್‌ ಎಸೆದು 18 ರನ್‌ ಬಿಟ್ಟು ಕೊಟ್ಟರು.

ಈ ಪಂದ್ಯದೊಂದಿಗೆ ಭಾರತ- ಅಫ್ಘಾನಿಸ್ತಾನ ತಂಡಗಳ ಏಷ್ಯಾ ಕಪ್‌ ಅಭಿಯಾನ ಅಂತ್ಯಗೊಂಡಿದೆ. ಶುಕ್ರವಾರ ನಡೆಯುವ ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲೂ ಲಂಕಾ- ಪಾಕ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಟೀಮ್‌ ಇಂಡಿಯಾ 212/2

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ್ದ ಟೀಮ್‌ ಇಂಡಿಯಾ, ವಿರಾಟ್‌ ಕೊಹ್ಲಿ ಗಳಿಸಿದ್ದ ಭರ್ಜರಿ ಶತಕದ ನೆರವಿನಿಂದ 2 ವಿಕೆಟ್‌ ನಷ್ಟದಲ್ಲಿ 212 ರನ್‌ ಗಳಿಸಿತ್ತು.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಕೆ ಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದ್ದರು. ಮೊದಲನೇ ವಿಕೆಟ್‌ಗೆ  12.4 ಓವರ್‌ಗಳಲ್ಲಿ 119 ರನ್‌ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. 41 ಎಸೆತಗಳನ್ನು ಎದುರಿಸಿದ ರಾಹುಲ್‌, 2 ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನಿಂದ 62 ರನ್‌ ಗಳಿಸಿ ಫರೀದ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ 6 ರನ್‌ ಗಳಿಸಿ ನಿರ್ಗಮಿಸಿದರೆ, ರಿಷಭ್‌ ಪಂತ್‌ 20 ರನ್‌ ಗಳಿಸಿ ಅಜೇಯರಾಗುಳಿದರು.  ಅಂತಿಮವಾಗಿ ಟೀಮ್‌ ಇಂಡಿಯಾ ಕೇವಲ 2 ವಿಕೆಟ್‌ ನಷ್ಟದಲ್ಲಿ 212 ರನ್‌ ಗಳಿಸಿ ಇನ್ನಿಂಗ್ಸ್‌ ಕೊನೆಗೊಳಿಸಿತು.

ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಟಿ20 ಪಂದ್ಯದಲ್ಲಿ ಮೊದಲ ಬಾರಿ ಮೂರಂಕಿಯ ಮೊತ್ತವನ್ನು ತಲುಪಿದ್ದಾರೆ.

ಚುಟುಕು ಮಾದರಿಯಲ್ಲಿ ಅವರಮೊದಲನೆಯ ಮತ್ತು ವೃತ್ತಿ ಜೀವನದ 71ನೇ ಶತಕ ಇದಾಗಿದ್ದು, 1020 ದಿನಗಳ ಬಳಿಕ ಕೊಹ್ಲಿ, ಮೈದಾನದಲ್ಲಿ ಮತ್ತೊಮ್ಮೆ ತಮ್ಮ ಗತ ವೈಭವವನ್ನು ನೆನಪಿಸುವ ರೀತಿಯಲ್ಲಿ ಬ್ಯಾಟ್‌ ಬೀಸಿದ್ದಾರೆ.

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೆ ಎಲ್ ರಾಹುಲ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದ ಕೊಹ್ಲಿ, 53 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 61 ಎಸೆತಗಳಲ್ಲಿ 122 ರನ್‌ ಗಳಿಸಿ ಅಜೇಯರಾಗುಳಿದರು. 12 ಬೌಂಡರಿ ಮತ್ತು 6 ಸಿಕ್ಸರ್‌ಗಳು ಈ ಸ್ಮರಣೀಯ ಇನ್ನಿಂಗ್ಸ್‌ ಒಳಗೊಂಡಿತ್ತು. ಸಿಕ್ಸರ್‌ ಮೂಲಕ ಶತಕ ತಲುಪಿದ ಕೊಹ್ಲಿ, ತಮ್ಮ ವಿವಾಹದ ರಿಂಗ್‌ನ್ನು ಚುಂಬಿಸಿ ಸಂಭ್ರಮಿಸಿದರು.

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ವೃತ್ತಿ ಜೀವನದ 105ನೇ ಪಂದ್ಯ ಇದಾಗಿದೆ. 2019, ಡಿಸೆಂಬರ್‌ 6ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಗಳಿಸಿದ್ದ ಅಜೇಯ 94 ರನ್‌, ಕೊಹ್ಲಿಯ ಇದುವರೆಗಿನ ಟಿ20 ಪಂದ್ಯದ ಅತ್ಯಧಿಕ ಸ್ಕೋರ್‌ ಆಗಿತ್ತು.

Join Whatsapp