ಏಷ್ಯಾ ಕಪ್ ಟೂರ್ನಿ: ಇಂದು ಬಾಂಗ್ಲಾದೇಶ- ಅಫ್ಘಾನಿಸ್ತಾನ ಮುಖಾಮುಖಿ

Prasthutha|

ದುಬೈ: ಏಷ್ಯಾ ಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಮಂಗಳವಾರ, ಬಾಂಗ್ಲಾದೇಶ- ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

- Advertisement -

ಶನಿವಾರ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ, ಶ್ರೀಲಂಕಾ ತಂಡವನ್ನು 8 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಶ್ರೀಲಂಕಾ ನೀಡಿದ್ದ 106 ರನ್ ಗಳ ಸವಾಲನ್ನು 10.1 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿ ಅಮೋಘ ಗೆಲುವು ಸಾಧಿಸಿತ್ತು. ಎರಡನೇ ಓವರ್ ನಲ್ಲೇ ಕೇವಲ ಐದು ರನ್ಗಳ ಅಂತರದಲ್ಲಿ ಲಂಕಾದ ಮೂವರು ಅಗ್ರಕ್ರಮಾಂಕದ ಬ್ಯಾಟ್ಸ್ಮನ್ ಗಳನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಅಫ್ಘಾನ್ ಬೌಲರ್ ಗಳು ಯಶಸ್ವಿಯಾಗಿದ್ದರು.

ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಅಫ್ಘಾನ್ ಪಡೆ, ಮಂಗಳವಾರದ ಪಂದ್ಯದಲ್ಲಿ ಬಾಂಗ್ಲಾ ಹುಲಿಗಳನ್ನು ಮಣಿಸುವ ಆತ್ಮವಿಶ್ವಾಸದಲ್ಲಿದೆ. ಆದರೆ ಅನುಭವಿ ಆಲ್ ರೌಡರ್ ಶಕೀಬ್ ಅಲ್ ಹಸನ್ ಸಾರಥ್ಯದಲ್ಲಿರುವ ಬಾಂಗ್ಲಾದೇಶ, ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆಯಲು ಕಠಿಣ ಅಭ್ಯಾಸ ನಡೆಸಿದೆ. ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ.

- Advertisement -

 ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ ತಂಡ ಟಿ20 ಆವೃತ್ತಿಗಳಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದೆ. ಆಗಸ್ಟ್ ಆರಂಭದಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ್ದ ಟಿ20 ಮತ್ತು ಏಕದಿನ ಸರಣಿಗಳರೆಡರಲ್ಲೂ ಬಾಂಗ್ಲಾದೇಶ, ಆತಿಥೇಯರಿಗೆ ಶರಣಾಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು. ಆದರೆ ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮುಹಮ್ಮದ್ ಸೈಫುದ್ದೀನ್, ಶಬ್ಬೀರ್ ರಹ್ಮಾನ್ ಹಾಗೂ ಮುಹಮ್ಮದ್ ನಯೀಮ್ ತಂಡಕ್ಕೆ ಮರಳಿರುವುದು ಬಾಂಗ್ಲಾದೇಶ ಕ್ಯಾಂಪ್ ನಲ್ಲಿ ಹೊಸ ಚೈತ್ಯನ್ಯ ಮೂಡಿಸಿದೆ.

ಕಳೆದ ಐದು ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಕಾಣುವಲ್ಲಿ ಸಫಲವಾಗಿದೆ. ಆದರೆ ಮತ್ತೊಂದೆಡೆ ಅಫ್ಘಾನಿಸ್ತಾನ ತನ್ನ ಕೊನೆಯ ಐದು ಹಣಾಹಣಿಗಳಲ್ಲಿ ಮೂರರಲ್ಲೂ ಗೆದ್ದು ಬೀಗಿದೆ.

ಸಂಭವನೀಯ ತಂಡ

ಅಫ್ಘಾನಿಸ್ತಾನ: ಹಝರತುಲ್ಲಾ ಝಜೈ, ರಹ್ಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಮುಹಮ್ಮದ್ ನಬಿ (ನಾಯಕ), ರಶೀದ್ ಖಾನ್, 8 ಅಝ್ಮತುಲ್ಲಾ ಒಮರ್ಝಾಯ್,  ನವೀನ್-ಉಲ್-ಹಕ್, ಮುಜೀಬ್ ಉರ್ ರಹ್ಮಾನ್, 11 ಫಝಲ್ ಹಕ್ ಫಾರೂಕಿ

ಬಾಂಗ್ಲಾದೇಶ: ಮುಹಮ್ಮದ್ ನಯಿಮ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹುಸೈನ್, ಮುಶ್ಫಿಕುರ್ ರಹೀಮ್ (ವಿಕೆಟ್ಕೀಪರ್), ಮುಹಮ್ಮದುಲ್ಲಾ, ಸಬ್ಬೀರ್ ರಹ್ಮಾನ್, 8 ಮಹ್ದಿ ಹಸನ್, ಮುಹಮ್ಮದ್ ಸೈಫುದ್ದೀನ್, ಮುಸ್ತಾಫಿಜುರ್ ರಹ್ಮಾನ್



Join Whatsapp