ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ ಅವರು ಟಿಪ್ಪು ಸುಲ್ತಾನ್ ಪರ ಮಾತನಾಡುವವರನ್ನು ಸಿದ್ದರಾಮಯ್ಯರ ಸಹಿತ ಹೊಡೆದು ಮುಗಿಸಬೇಕು ಎಂದು ಹೇಳಿರುವುದು ಅವರ ಕೀಳು ಮನೋಭಾವ ತೋರಿಸುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಸಿ 353, 504, 506 ಪ್ರಕಾರ ಇದು ಕ್ರಿಮಿನಲ್ ಹೇಳಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಲ್ಲಲು ಹೇಳಿರುವುದು ಪೊಲೀಸರು ತಾವಾಗಿಯೇ ಮೊಕದ್ದಮೆ ದಾಖಲಿಸಿಕೊಳ್ಳಬೇಕು, ಮುಖ್ಯಮಂತ್ರಿಗಳು ಈ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಐವನ್ ಹೇಳಿದರು.
ನಾನಾ ಜಿಲ್ಲೆಗಳಲ್ಲಿ ಪೊಲೀಸರಿಗೆ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರು ಕೂಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಉಪ ಆಯುಕ್ತರು ದೂರು ಸ್ವೀಕರಿಸಿದ್ದಾರೆ. ಅವರು ಕ್ರಮ ತೆಗೆದುಕೊಳ್ಳುವರು ಎಂದು ಅವರು ಹೇಳಿದರು.
ಅಶ್ವಥ ನಾರಾಯಣರಿಗೆ ಹುಚ್ಚಾಸ್ಪತ್ರೆಯ ಹೊರತು ಬೇರೆ ಆಸ್ಪತ್ರೆಯ ಚಿಕಿತ್ಸೆ ಸಾಕಾಗದು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಹ ಟಿಪ್ಪು ಸುಲ್ತಾನ್ ಪುಸ್ತಕ ತಂದಿದ್ದಾರೆ. ಅಶ್ವಥ ನಾರಾಯಣರು ಅವರನ್ನೂ ಮುಗಿಸಲು ಹೇಳುತ್ತಾರೆಯೆ? ರಾಜ್ಯಪಾಲರು ಮಧ್ಯ ಪ್ರವೇಶಿಸಿ ಅಶ್ವಥ ನಾರಾಯಣರನ್ನು ವಜಾ ಮಾಡಬೇಕು. ಬಿಜೆಪಿಯವರು, ಮೋದಿಯವರು ಇದನ್ನು ಪ್ರೋತ್ಸಾಹಿಸುತ್ತಾರೆಯೇ ಇಲ್ಲದಿದ್ದರೆ ಅವರನ್ನು ಖಂಡಿಸಲು. ಕ್ರಮ ತೆಗೆದುಕೊಳ್ಳದಿದ್ದರೆ ನಾವು ಬೀದಿಗಿಳಿದು ಹೋರಾಡುವುದಾಗಿ ಐವಾನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಪ್ಪಿ, ಸಬಿತ ಮಿಸ್ಕಿತ್, ಇಬ್ರಾಹಿಂ ಕೋಡಿಜಾಲ್, ಪ್ರಕಾಶ್ ಸಾಲಿಯಾನ್, ಸಲೀಂ, ಭಾಸ್ಕರರಾವ್, ಪುರ್ತಾಡೊ ಮೊದಲಾದವರು ಉಪಸ್ಥಿತರಿದ್ದರು.