ಅಶ್ವತ್ ನಾರಾಯಣ್ ‘ಎನ್ಕೌಂಟರ್ ಹೇಳಿಕೆ’ ಕಾನೂನು ಬಾಹಿರ: ಆಪ್ ಕಿಡಿ

Prasthutha|

►ಅಭಿವೃದ್ಧಿ ಹಾಗೂ ಕಾನೂನು ಪಾಲನೆಯಿಲ್ಲದ ಯೋಗಿ ಮಾದರಿ ಕರ್ನಾಟಕಕ್ಕೆ ಬೇಡ

- Advertisement -

ಬೆಂಗಳೂರು: ಹತ್ಯೆಯ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕೆಂಬ ಕಾನೂನು ಬಾಹಿರ ಹೇಳಿಕೆ ನೀಡಿ, ಜನರನ್ನು ಹಾದಿ ತಪ್ಪಿಸುತ್ತಿರುವ ಡಾ. ಸಿ.ಎನ್. ಅಶ್ವತ್ ನಾರಾಯಣ್ ಸಚಿವರಾಗಿರುವುದು ರಾಜ್ಯದ ದುರಾದೃಷ್ಟ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆರೋಪಿಸಿದ್ದಾರೆ.

ಬೆಂಗಳೂರಿನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರ ಹೇಳಿಕೆಗಳನ್ನು ಗಮನಿಸಿದರೆ ಜಂಗಲ್ ರಾಜ್ ತರಲು ಪ್ರಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಯಾವ ಸಂದರ್ಭಗಳಲ್ಲಿ ಎನ್ಕೌಂಟರ್ ಮಾಡಲಾಗುತ್ತದೆ ಎಂಬ ಅರಿವಿಲ್ಲದೇ ಅನಾಗರಿಕರಂತೆ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಪ್ರವೀಣ್ ನೆಟ್ಟಾರುರವರ ಹತ್ಯೆಯನ್ನೇ ನೆಪ ಮಾಡಿಕೊಂಡು ರಾಜ್ಯ ಬಿಜೆಪಿಯು ಜನರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

- Advertisement -

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಅಭಿವೃದ್ಧಿ ಹಾಗೂ ಕಾನೂನು ಪಾಲನೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಿರುವಾಗ ಕರ್ನಾಟಕದಲ್ಲಿ ಯೋಗಿ ಮಾದರಿ ಕ್ರಮಕೈಗೊಳ್ಳುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತಾಡುತ್ತಿರುವುದು ಸರಿಯಲ್ಲ. ಯೋಗಿ ಮಾದರಿ ಸರಕಾರ ನಮಗೆ ಬೇಕಾಗಿಲ್ಲ. ಕೇವಲ ಕೋಮು ಧ್ರುವೀಕರಣ ರಾಜಕಾರಣವನ್ನೇ ಹೊಂದಿರುವ ಬಿಜೆಪಿಯು ಕರ್ನಾಟಕವನ್ನು ಸಹ ತನ್ನ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಡಮ್ಮಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಬಳಸಿಕೊಳ್ಳುತ್ತಿರುವುದು ತೀರಾ ಅಸಹ್ಯಕಾರಿ ಸಂಗತಿ ಎಂದು ಹೇಳಿದ್ದಾರೆ.

ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡಿಸಲು ಮುಖ್ಯಮಂತ್ರಿಯವರು ಉತ್ತರ ಪ್ರದೇಶದ ಹೆಸರನ್ನು ಹೇಳುತ್ತಿದ್ದಾರೆ. ಯೋಗಿ ಮಾದರಿಯಂತೆ ಕಂಡಕಂಡವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೋಮುಗಲಭೆ ಗಳಿಂದಲೇ ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಯವರ ನತದೃಷ್ಟ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಸಾಮರ್ಥ್ಯವಿದ್ದರೆ ಆರೋಪಿಗಳಿಗೆ ಕಾನೂನಿನ ಅನ್ವಯವೇ ಕಠಿಣ ಶಿಕ್ಷೆಯನ್ನು ಶೀಘ್ರ ಕೊಡಿಸಲಿ” ಎಂದು ನಂಜಪ್ಪ ಕಾಳೇಗೌಡ ಹೇಳಿದರು.

ರಾಜ್ಯದ ಅಮಾಯಕ ಯುವ ಜನಾಂಗವನ್ನು ರಕ್ತಪಾತ ದೆಡೆಗೆ ತಳ್ಳುತ್ತಿರುವ ಬಿಜೆಪಿಯ ನಡೆಯನ್ನು ಯುವಜನತೆ ಸೂಕ್ಷ್ಮ ಮನಸ್ಸುಗಳಿಂದ ಗಮನಿಸುತ್ತಿದೆ. ಇದರ ಪ್ರತಿಫಲವನ್ನು ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಮಂತ್ರಿ ಸುನೀಲ್ ಕುಮಾರ್ ಮೊನ್ನೆ ನಡೆದ ಘಟನೆಯಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ಅಪಮಾನಿತರಾಗಿ ದ್ದಾರೆ. ರಾಜ್ಯದ ಜನತೆ ಛೀ ಥೂ ಎಂದು ಉಗಿಯುವ ಮುಂಚೆಯೇ ಜನೋತ್ಸವ ಕಾರ್ಯಕ್ರಮವನ್ನು ಸಹ ರದ್ದು ಮಾಡಿದ್ದಾರೆ. ಇದಕ್ಕಿಂತ ಅಪಮಾನಕಾರಿ ಆದಂಥ ಸಂಗತಿ ಬಿಜೆಪಿಗರಿಗೆ ಮತ್ತೊಂದಿಲ್ಲ ಎಂದು ಪಕ್ಷದ ಹಿರಿಯ ವಕೀಲ ಲಕ್ಷ್ಮೀಕಾಂತ ರಾವ್ ರವರು ಮಾತನಾಡುತ್ತಾ ವಿಷಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿರುವ ಆಡಿಯೋ ವೈರಲ್ ಆಗಿದೆ. ದೇಶಭಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ತೇಜಸ್ವಿ ಸೂರ್ಯರವರ ದೇಶಭಕ್ತಿ ಎಂತಹದ್ದು ಎನ್ನುವುದು ಇದರಿಂದಲೇ ತಿಳಿಯುತ್ತದೆ. ತೇಜಸ್ವಿ ಸೂರ್ಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮೀಕಾಂತ್ ರಾವ್ ಆಗ್ರಹಿಸಿದರು.



Join Whatsapp