ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ ಹಿಂದಿ, ಆಂಗ್ಲ ಭಾಷೆ ಮಾತನಾಡಲು ಬರುವುದಿಲ್ಲ.ಅವರನ್ನು ಗೆಲ್ಲಿಸುವುದರಲ್ಲಿ ಅರ್ಥವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಕೊಟ್ಟ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಕಿಡಿಗಾರಿದ ವಿಪಕ್ಷ ನಾಯಕ ಆರ್. ಅಶೋಕ, ನೆಹರೂ-ಗಾಂಧಿ ಕುಟುಂಬದ ಏಜೆಂಟುಗಳು, ಹೈಕಮಾಂಡ್ ಕಲೆಕ್ಷನ್ ಗಿರಾಕಿಗಳ ಜತೆ ವ್ಯವಹಾರ ಮಾಡೋಕೆ ಇಟಾಲಿಯನ್, ಇಂಗ್ಲೀಷ್, ಹಿಂದಿ ಭಾಷೆಗಳು ಬರಲೇಬೇಕು ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿ ಅನಿವಾರ್ಯ ಇರಬಹುದು. ಆದರೆ ಮಾತೃಭಾಷೆಗೆ, ಸಂವಿಧಾನಕ್ಕೆ ಗೌರವ ಕೊಡುವ ನಮ್ಮ ಬಿಜೆಪಿ ಪಕ್ಷದಲ್ಲಿ ಕನ್ನಡ ಬಂದರೆ ಸಾಕು, ದೆಹಲಿ ರಾಜಕಾರಣವೂ ಮಾಡಬಹುದು, ಎಂತಹ ಉನ್ನತ ಸ್ಥಾನ ಬೇಕಾದರೂ ಅಲಂಕರಿಸಬಹುದು ಎಂದಿದ್ದಾರೆ.
ಅತ್ಯಂತ ಬಡ ಕುಟುಂಬದಿಂದ ಬಂದ ಒಬ್ಬ ಸರಳ, ಸಜ್ಜನಿಕೆಯ ರಾಜಕಾರಣಿ ಎಂದು ಇಡೀ ರಾಜ್ಯದಲ್ಲಿ ಗೌರವಕ್ಕೆ ಪಾತ್ರರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಎದುರು ಚುನಾವಣೆ ಎದುರಿಸಲಾಗದೆ ಹತಾಶೆಯಿಂದ ಈ ರೀತಿ ವೈಯಕ್ತಿಕ ನಿಂದನೆ ಮಾಡುವುದು ನಿಮಗೆ ಶೋಭೆ ತರುವುದಿಲ್ಲ ಜಯಪ್ರಕಾಶ್ ಹೆಗ್ಡೆ ಅವರೇ ಎಂದಿದ್ದಾರೆ.