ಲಖಿಂಪುರ ಪ್ರಕರಣ | ಇಂದು ಪೊಲೀಸರ ಮುಂದೆ ಹಾಜರಾಗಲಿರುವ ಕೇಂದ್ರ ಸಚಿವರ ಪುತ್ರ ಆರೋಪಿ ಆಶಿಶ್ ಮಿಶ್ರಾ

Prasthutha|

ಲಖ್ನೋ: ರೈತ ಹೋರಾಟಗಾರರ ಪ್ರತಿಭಟನೆಯ ಸಂದರ್ಭ ಕಾರು ಹತ್ತಿಸಿ ರೈತರನ್ನು ಕೊಂದಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇಂದು ಉತ್ತರ ಪ್ರದೇಶ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಭಾನುವಾರ ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಆಶಿಶ್ ಇಂದು ಬೆಳಗ್ಗೆ 11ರ ವೇಳೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

- Advertisement -

ಲಖಿಂಪುರದಲ್ಲಿ ಕೇಂದ್ರ ಸಚಿವನ ಪುತ್ರ ನಡೆಸಿದ್ದ ಭೀಕರ ಕೃತ್ಯಕ್ಕೆ ಸ್ಥಳದಲ್ಲಿ 4 ಜನ ರೈತರು ಮೃತಪಟ್ಟಿದ್ದರು. ನಂತರ ನಡೆದ ಗಲಭೆಯಲ್ಲಿ ಕನಿಷ್ಠ 5 ಜನ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆಶಿಶ್ ಮಿಶ್ರಾ ನನ್ನು ಬಂಧಿಸುವಂತೆ ವಿಪಕ್ಷಗಳು ಸೇರಿದಂತೆ ರೈತ ಹೋರಾಟಗಾರರು ಆಗ್ರಹಿಸಿದ್ದರು, ಅಲ್ಲದೇ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶೀಶ್ ಮಿಶ್ರಾ ವಿರುದ್ಧ ದೇಶದಾದ್ಯಂತ ಆಕ್ರೋಶಗಳೂ ವ್ಯಕ್ತವಾಗಿತ್ತು. ಈ ಪರಿಣಾಮ ಆಶಿಶ್ ವಿರುದ್ಧ ಸೆಕ್ಷನ್.302 ಅಡಿಯಲ್ಲಿ ಕೊಲೆ ಆರೋಪದಡಿ FIR ದಾಖಲಿಸಲಾಗಿತ್ತು.

ಕಳೆದ ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳಾದ ಆಶೀಶ್ ಮಿಶ್ರಾ ಮತ್ತು ಮೋನು ಭೈಯ್ಯಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ಕಣ್ತಪ್ಪಿಸಿಕೊಂಡಿದ್ದ ಆರೋಪಿಗಳಿಗೆ ಪೊಲೀಸರು ಮತ್ತೊಂದು ನೋಟೀಸ್ ಜಾರಿಗೊಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.



Join Whatsapp