ಆಶಾ ಪ್ರತಿಭಟನೆ: ಶ್ರಮಿಕ ವರ್ಗಗಳ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಅಸಡ್ಡೆ; ವಿಜಯೇಂದ್ರ

Prasthutha|

ಬೆಂಗಳೂರು: ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ನಡೆಸುತ್ತಿರುವ ಧರಣಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

- Advertisement -

ಆಶಾ ಕಾರ್ಯಕರ್ತೆಯರ ಸಂಕಷ್ಟಗಳಿಗೆ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, ಶ್ರಮಿಕ ವರ್ಗಗಳ ಮೇಲೆ ಕಾಂಗ್ರೆಸ್ ಸರ್ಕಾರಕ್ಕಿರುವ ಅಸಡ್ಡೆತನವನ್ನು ಇದು ಸಾಕ್ಷೀಕರಿಸುತ್ತಿದೆ ಎಂದಿದ್ದಾರೆ.

- Advertisement -

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದಿರುವ 25ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎರಡನೇ ದಿನವೂ ಕೊರೆವ ಚಳಿಯಲ್ಲಿಯೇ ರಾತ್ರಿ ಕಳೆದು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ಆಶಾ ಕಾರ್ಯಕರ್ತೆಯರ ಮತ ಪಡೆಯಲು ಬೆಟ್ಟದಷ್ಟು ಪೊಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಬೇಡಿಕೆ ಈಡೇರಿಸದೇ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಲೆ ಕೊಡದ ಈ ಸರ್ಕಾರಕ್ಕೆ ನಾಡಿನ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದಿದ್ದಾರೆ.

ಈ ಕೂಡಲೇ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.



Join Whatsapp