ತುಮಕೂರು: ದಲಿತರ ಬೀದಿ ಬರುತ್ತಿದ್ದಂತೆ ದೇವರ ಮೆರವಣಿಗೆ ವಾಪಸ್ಸಾದ ಘಟನೆ ತಿಪಟೂರು ತಾಲೂಕಿನ ಹುಣಸೇಘಟ್ಟ ಗ್ರಾಮದಲ್ಲಿ ನಡೆದಿದೆ. ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಗ್ರಾಮಸ್ಥರು ಆಂಜನೇಯನನ್ನು ಹೊತ್ತು ಮೆರವಣಿಗೆ ನಡೆಸಿದ್ದರು. ಮೆರವಣಿಗೆ ಗ್ರಾಮದ ಸುತ್ತಲೂ ಹಾದು ಹೋಗಿದ್ದು, ದಲಿತರ ಬೀದಿಗೆ ಹೋಗಲು ಹಿಂದೇಟು ಹಾಕಿದ್ದಾರೆ, ಬಳಿಕ ಸ್ಥಳದಲ್ಲಿ ಮೆರವಣಿಗೆ ನಡೆಸದೇ ವಾಪಸಾಗಿದ್ದಾರೆ.
ಕಳೆದ ಶನಿವಾರ ಗ್ರಾಮದಲ್ಲಿ ನಡೆದಿದ್ದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ವೇಳೆ ದಲಿತರ ಬೀದಿಗೆ ಮೆರವಣಿಗೆ ಹಾದು ಹೋಗದೇ ಇರುವುದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. . ಆಂಜನೇಯ ಸ್ವಾಮಿ, ದೊಡ್ಡಮ್ಮ, ಚಿಕ್ಕಮ್ಮ ದೇವರನ್ನು ಹೊತ್ತ ಗ್ರಾಮಸ್ಥರು ಹಿಂದೇಟು ಹಾಕಿದ್ದಲ್ಲದೇ ದಲಿತರಿಗೆ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತರ ಬೀದಿಗೆ ನಾವು ದೇವರನ್ನ ಕಳುಹಿಸುವುದಿಲ್ಲ, ದಲಿತರ ಕಾಲೋನಿಯಲ್ಲಿ ಮೆರವಣಿಗೆ ನಡೆಸಿದರೆ ದೇವರಿಗೆ ಮೈಲಿಗೆಯಾಗುತ್ತೆ ಎಂದು ಹೇಳುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಬೀದಿಯಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು, ಮಂಗಳಾರತಿ ಮಾಡಿಸಿಕೊಂಡು ಹೋಗಿ ಎಂದು ದಲಿತರು ಪಟ್ಟು ಹಿಡಿದಿದ್ದರೆನ್ನಲಾಗಿದೆ.