21ರ ಹರೆಯದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ದೇಶದ ಅತಿ ಕಿರಿಯ ಮೇಯರ್!

Prasthutha|

ತಿರುವನಂತಪುರಂ : ಬಿಎಸ್ಸಿ ವಿದ್ಯಾರ್ಥಿನಿ, 21ರ ಹರೆಯದ ಆರ್ಯ ರಾಜೇಂದ್ರನ್ ಇದೀಗ ತಿರುವನಂತಪುರಂನ ನೂತನ ಮೇಯರ್ ಆಗಿ ಆಯ್ಕೆಯಾಗುವ ಎಲ್ಲಾ ಸಿದ್ಧತೆಗಳು ನಡೆದಿವೆ. ಕೇರಳದ ರಾಜಧಾನಿ ತಿರುವನಂತಪುರಂನ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ, ಆಕೆ ಇಡೀ ದೇಶದಲ್ಲೇ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುದವನ್ ಮುಗಲ್ ವಾರ್ಡ್ ನಿಂದ ಸಿಪಿಎಂ ಅಭ್ಯರ್ಥಿಯಾಗಿ ಆರ್ಯ ಕಣಕ್ಕಿಳಿದಿದ್ದರು. ತಮ್ಮ ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ಶ್ರೀಕಲಾ ಅವರನ್ನು 2,872 ಮತಗಳಿಂದ ಸೋಲಿಸಿ ಆರ್ಯ ವಿಜಯ ಪತಾಕೆ ಹಾರಿಸಿದ್ದರು. ಜಿಲ್ಲೆಯಲ್ಲಿ ಅತಿ ಕಿರಿಯ ಅಭ್ಯರ್ಥಿಯೂ ಆರ್ಯ ಆಗಿದ್ದರು.

ತಿರುವನಂತಪುರಂನ ಆಲ್ ಸೈಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ವರ್ಷದ ಪದವಿ ಗಣಿತ ವಿದ್ಯಾರ್ಥಿನಿಯಾದ ಆರ್ಯ ಬಾಲ ಸಂಘಂನ ರಾಜ್ಯಾಧ್ಯಕ್ಷೆಯೂ ಆಗಿದ್ದಾರೆ. ಅಲ್ಲದೆ ಎಸ್ ಎಫ್ ಐನ ರಾಜ್ಯ ಪದಾಧಿಕಾರಿಯೂ ಆಗಿದ್ದಾರೆ. ಸಿಪಿಎಂನ ಶಾಖಾ ಸಮಿತಿ ಸದಸ್ಯೆಯೂ ಆಗಿದ್ದಾರೆ.

- Advertisement -

ಆರ್ಯ ಎಲೆಕ್ಟ್ರಿಷಿಯನ್ ರಾಜೇಂದ್ರನ್ ಮತ್ತು ಎಲ್ ಐಸಿ ಏಜೆಂಟ್ ಶ್ರೀಲತಾ ಅವರ ಮಗಳು. ಸಿಪಿಎಂ ಜಿಲ್ಲಾ ಸಮಿತಿಯು ಆರ್ಯರನ್ನೇ ಮೇಯರ್ ಅಭ್ಯರ್ಥಿಯಾಗಿ ಶುಕ್ರವಾರ ಅಂತಿಮಗೊಳಿಸಿದೆ.

ಆದಾಗ್ಯೂ, ತನಗೆ ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಆರ್ಯ ಹೇಳಿದ್ದಾರೆ. ನಾನು ಈಗ ಕೌನ್ಸಿಲರ್ ಆಗಿದ್ದೇನೆ. ಪಕ್ಷ ಜವಾಬ್ದಾರಿ ನೀಡಿದಲ್ಲಿ, ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನಾ ಯುವ ಜನರನ್ನು ಪಕ್ಷದತ್ತ ಸೆಳೆಯಲು ಸಿಪಿಎಂ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಯುವ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು.



Join Whatsapp