‘ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರನ್ನು ಗಲ್ಲಿಗೇರಿಸಬೇಕು’: ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಕೇಜ್ರಿವಾಲ್

Prasthutha|

ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲ ಸೂಚಿಸಿದ್ದು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರನ್ನು ಗಲ್ಲಿಗೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೇಜ್ರಿವಾಲ್, ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು ಒಂದು ವಾರದಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಅವಮಾನಿತರಾಗಿದ್ದಾರೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರನ್ನು ಗಲ್ಲಿಗೇರಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ವರೆಗೂ ಹೋಗಬೇಕಾಗಿ ಬಂದಿರುವುದು ದುರದೃಷ್ಟಕರ. ದೇಶವನ್ನು ಪ್ರೀತಿಸುವವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ಕೇಜ್ರಿವಾಲ್ ಹೇಳಿದ್ದಾರೆ.

- Advertisement -

ರಾಜಕಾರಣಿಯೊಬ್ಬರು ನಮ್ಮ ಮಹಿಳೆಯರು ಮತ್ತು ಸಹೋದರಿಯರ ವಿರುದ್ಧ ಗಂಭೀರವಾದ ಕೃತ್ಯವನ್ನು ನಡೆಸಿದ್ದಾರೆ. ಬಿಜೆಪಿ ಸಂಸದರ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕೇ ಹೊರತು ಪ್ರತಿಭಟನಾಕಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

‘ಇವರು ದೇಶಕ್ಕಾಗಿ ಪದಕಗಳನ್ನು ಗಳಿಸಿಕೊಟ್ಟವರು. ಅವರಿಗೆ ನ್ಯಾಯ ಸಿಗಬೇಕು. ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಆತನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ತಮ್ಮ ಪ್ರತಿಭಟನೆಯನ್ನು ನಿಲ್ಲಿಸದ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಜೈಲಿಗೆ ಹೋಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಆದರೆ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸ್ಥಾನಕ್ಕೆ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಬ್ರಿಜ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

Join Whatsapp