ಬೆಂಗಳೂರು: ರಾಜ್ಯದ ಹಲವು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರಸಗೊಬ್ಬರದ ಅಭಾವ ವಿಪರೀತವಿದೆ. ಯೂರಿಯಾ, ಸುಫಲಾ, DAP ಗೊಬ್ಬರ ಸೊಸೈಟಿಗಳಲ್ಲಿ ಸಿಗುತ್ತಿಲ್ಲ. ಕೇಳಿದರೆ ಸಪ್ಲೈ ಇಲ್ಲ ಎನ್ನುವ ಉತ್ತರವಿದೆ. ಆದರೆ ಕಾಳಸಂತೆಯಲ್ಲಿ ಈ ಎಲ್ಲಾ ಗೊಬ್ಬರಗಳು ಹೆಚ್ಚಿನ ದರದಲ್ಲಿ ಲಭ್ಯವಿದೆ. ಕಾಳಸಂತೆಯಲ್ಲಿ ಲಭ್ಯವಿರುವ ಈ ಗೊಬ್ಬರಗಳು ಸೊಸೈಟಿಯಲ್ಲಿ ಯಾಕಿಲ್ಲ? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ, ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೆ ಪೂರೈಸುವ ರಸಗೊಬ್ಬರ ಕಾಳಸಂತೆ ಸೇರುತ್ತಿದೆ. ಕಮೀಷನ್ ಆಸೆಯಿಂದ ಕೆಲವು ಸೊಸೈಟಿ ಸಿಬ್ಬಂದಿಗಳೇ ತಮಗೆ ಪೂರೈಕೆಯಾದ ಗೊಬ್ಬರಗಳನ್ನು ಕಾಳಸಂತೆಗೆ ಮಾರುತ್ತಿರುವ ದೂರುಗಳಿವೆ. ರೈತರು ಸೊಸೈಟಿಯಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಖರೀದಿಸಬೇಕಾಗಿದೆ. ಈ ಬಗ್ಗೆ ಕ್ರಮವೇನು? ಎಂದು ಹೇಳಿದರು.
ಕೆಲವು ಕೃಷಿ ಪತ್ತಿನ ಸಹಕಾರ ಸಂಘಗಳು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿವೆ. ಈಗ ಮಳೆ ಸ್ವಲ್ಪ ಬಿಡುವು ನೀಡಿರುವುದರಿಂದ ಗಿಡಗಳ ಹಾಗೂ ಬೆಳೆಗಳ ಚಿಗುರು ಒಡೆಯಲು ಯೂರಿಯಾ ಹಾಕುವುದು ಅನಿವಾರ್ಯ. ಆದರೆ ಸೊಸೈಟಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಇದೆ. ರೈತರು ಅನ್ಯಮಾರ್ಗವಿಲ್ಲದೆ ಕಾಳಸಂತೆಯಲ್ಲಿ ಯೂರಿಯಾ ಖರೀದಿಸಬೇಕು. ಇದು ರೈತರ ಶೋಷಣೆಯಲ್ಲವೆ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಕೃಷಿ ಸಚಿವರು ರಸಗೊಬ್ಬರದ ಅಭಾವವಾಗದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿಕೆ ಕೊಡುತ್ತಾರೆ. ಆದರೆ ವಾಸ್ತವವಾಗಿ ರೈತರಿಗೆ ರಸಗೊಬ್ಬರವೇ ಸಿಗುತ್ತಿಲ್ಲ. ರಸಗೊಬ್ಬರ ಪೂರೈಕೆಯಲ್ಲೂ ‘ಕಮೀಷನ್’ ದಂಧೆ ನಡೆಯುತ್ತಿರುವುದು ಸತ್ಯ. ಕಮೀಷನ್ ದಂಧೆ ನಡೆಯುತ್ತಿಲ್ಲ ಎಂದಾದರೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿರುವವರು ಯಾರು ಎಂದು ಉತ್ತರ ಕೊಡಲಿ? ಎಂದು ಅವರು ಟ್ವೀಟ್ ಮಾಡಿದ್ದಾರೆ.