ಬೆಂಗಳೂರು: ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್‌ಐಟಿ, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರೆಸ್ಟ್ ವಾರಂಟ್ ಪಡೆದಿದೆ.
ಈಮೇರೆಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಆರ್‌ಆರ್‌ಒ) ಪತ್ರ ಬರೆದು ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಪಡಿಸಲು ತಯಾರಿ ನಡೆಸಿದ್ದಾರೆ. ಪಾಸ್‌ಪೋರ್ಟ್ ರದ್ದಾದರೆ ವೀಸಾ ಅವಧಿ ವಿಸ್ತರಣೆ ಅಥವಾ ಬೇರೆ ದೇಶಕ್ಕೆ ವೀಸಾ ಪಡೆಯಲು ಅಸಾಧ್ಯ. ಪ್ರಜ್ವಲ್, ದೇಶದಿಂದ ದೇಶಕ್ಕೆ ಸ್ಥಳಾಂತರ ಆಗಲು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ಪ್ರಜ್ವಲ್, ಸ್ವದೇಶಕ್ಕೆ ವಾಪಸ್ ಬರಬೇಕಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣ ಕೇಂದ್ರ ಸರ್ಕಾರದಡಿ ಬರಲಿದೆ.
ನಗರದ 42ನೇ ಎಸಿಎಂಎಂ (ಜನಪ್ರತಿನಿಧಿಗಳ) ಕೋರ್ಟ್, ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವಂತೆ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದ್ದರು. ಆರೋಪಿ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್ ಮಾಹಿತಿ ಕೇಳಿತ್ತು. ಲುಕ್‌ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಬಂಧನಕ್ಕೆ ಚಾರ್ಜ್‌ಶೀಟ್ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿತ್ತು. ಹೀಗಾಗಿ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.