ಝುಬೈರ್ ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದ ಸುಪ್ರೀಂಕೋರ್ಟ್ ಪೀಠ
ನವದೆಹಲಿ: ಆಲ್ಟ್ ನ್ಯೂಸ್ ಸಹ ಸ್ಥಾಪಕ ಮುಹಮ್ಮದ್ ಝಬೈರ್ ವಿರುದ್ಧ ಒಂದೇ ದೂರನ್ನು ಆರು ಕಡೆ ಬಳಸಿ ಹೊರ ಬಾರದಂತೆ ಮಾಡಿದ ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಜಸ್ಟಿಸ್ ಗಳಾದ ಡಿ. ವೈ. ಚಂದ್ರಚೂಡ್, ಸೂರ್ಯಕಾಂತ್, ಎ. ಎಸ್. ಬೋಪಣ್ಣ ಅವರಿದ್ದ ಪೀಠವು ಪ್ರಶ್ನಿಸಿದೆ.
ಬಂಧಿಸುವುದನ್ನು ಕಾನೂನು ನಿಯಮಾವಳಿ ಪ್ರಕಾರವೇ ನಡೆಸಬೇಕು ಎಂದು ಅರ್ನೇಶ್ ಕುಮಾರ್ ಕೇಸಿನಲ್ಲಿ ಹೇಳಿದ್ದನ್ನು ಸುಪ್ರೀಂ ಕೋರ್ಟ್ ಪೀಠ ಪುನರುಚ್ಚರಿಸಿದೆ.
ಜುಲೈ 20ರಂದು ಜಾಮೀನು ನೀಡಿದ ಕೋರ್ಟ್ ಜು. 25ರಂದು ಪೂರ್ಣ ತೀರ್ಪು ಪ್ರತಿಯನ್ನು ಬಿಡುಗಡೆ ಮಾಡಿದೆ. ಒಂದೇ ಪ್ರಕರಣಕ್ಕೆ ಒಂದೇ ದೂರು ಪ್ರತಿಯನ್ನು ಹಲವಾರು ಕಡೆ ಸಲ್ಲಿಸಿರುವುದು ಒಂದು ತಿರುಗಾಡಿಸುವ ಅಪರಾಧೀ ವೃತ್ತ ಎಂದು ಪೀಠ ಹೇಳಿದೆ.
ಝುಬೈರ್ ರನ್ನು ಹಲವು ಪ್ರಕ್ರಿಯೆಗಳಲ್ಲಿ ಸುತ್ತಾಡಿಸಿರುವುದೇ ಒಂದು ಶಿಕ್ಷೆ. ಒಂದೇ ಎಫ್ ಐಆರ್ ಪ್ರತಿ ಎಲ್ಲೆಡೆ ಬಳಕೆಯಾಗಿದೆ. ಆದ್ದರಿಂದಲೇ ಸುಪ್ರೀಂ ಕೋರ್ಟು ಅವೆಲ್ಲವನ್ನೂ ಒಗ್ಗೂಡಿಸಿದೆ.
ಅಪರಾಧ ಬಿಡಿಸಲು, ತನಿಖೆಗೆ ಎಂದು ಆರೋಪಿಯನ್ನು ಬಂಧಿಸಬೇಕಾಗುತ್ತದೆ. ಆದರೆ ಬೇಕಾಬಿಟ್ಟಿಯಲ್ಲ. ಹಾಗೆ ಬಂಧಿಸುವಾಗ ಪೊಲೀಸ್ ಅಪರಾಧ ದಂಡ ಸಂಹಿತೆ 41(1ಬಿ- ii) ಪ್ರಕಾರ ಈ ಬಂಧನ ಅತ್ಯಗತ್ಯವೇ, ನ್ಯಾಯಬದ್ಧವೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಬಂಧಿಸದೆಯೇ ಒಬ್ಬರನ್ನು ಕೋರ್ಟಿನಲ್ಲಿ ನಿಲ್ಲಿಸುವುದು ಸಹ ಸಾಧ್ಯವಿದೆ ಎಂದೂ ಪೀಠವು ಸ್ಪಷ್ಟಪಡಿಸಿದೆ.
ಬಂಧನವನ್ನು ಶಿಕ್ಷೆಯ ಸಾಧನವಾಗಿ ಬಳಸಬಾರದು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಹಾಕಲೆಂದೇ ಬಂಧಿಸಬಾರದು. ದೂರಿನ ಆಧಾರದ ಮೇಲೆ ಬಂಧನವಲ್ಲ. ದೂರನ್ನು ವಿಶ್ಲೇಷಿಸಿದ ಮೇಲೆ ಬಂಧನ. ಹಾಗಲ್ಲದಿದ್ದರೆ ಅದು ಅಧಿಕಾರದ ದುರುಪಯೋಗವಾಗುತ್ತದೆ ಎಂದು ತೀರ್ಪು ಒತ್ತಿ ಹೇಳಿದೆ.
ಜಾಮೀನು ಕಾಲದಲ್ಲಿ ಝುಬೈರ್ ಟ್ವೀಟ್ ಮಾಡುವುದನ್ನು ತಡೆಯಬೇಕು ಎಂಬ ಉತ್ತರ ಪ್ರದೇಶದ ಪರ ವಾದವನ್ನು ಸಹ ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ. ಅದು ಅಭಿಪ್ರಾಯ ಸ್ವಾತಂತ್ರ್ಯದ ದಮನ ಎಂದು ಹೇಳಿತು.
ಕೋರ್ಟುಗಳು ಜಾಮೀನು ಷರತ್ತುಗಳನ್ನು ಸಮತೋಲನವಾಗಿ ಹಾಕಬೇಕು. ಅದನ್ನೇ ಒಂದು ಶಿಕ್ಷೆಯಂತೆ ಹಾಕಬಾರದು ಎಂದು ನ್ಯಾಯಾಲಯಗಳನ್ನೂ ವಿಮರ್ಶಿಸಿ, ಪೋಲೀಸರಿಗೆ ಅಂಥ ಮನವಿ ಸಲ್ಲಿಸದಂತೆ ಹೇಳಿತು. ನ್ಯಾಯಬದ್ಧ ತೀರ್ಮಾನವು ಬಂಧಿಸುವ ತೀರ್ಮಾನದೊಂದಿಗೇ ಆಗಬೇಕು ಎಂದು ಪೀಠ ತಿಳಿಸಿತು.
ಝುಬೈರ್ ರದು ಒಂದು ಸಾಮಾಜಿಕ ಜಾಲ ತಾಣ, ಸುದ್ದಿ ನೆಲೆ. ಅದರು ಟ್ವೀಟ್ ಮಾಡಬಾರದು ಎನ್ನುವುದು ಅವರ ಅಭಿಪ್ರಾಯ ಹತ್ತಿಕ್ಕುವ ಕೆಲಸವಾಗುತ್ತದೆ. ಅಭಿಪ್ರಾಯ ಪ್ರತಿ ನಾಗರಿಕನ ಹಕ್ಕು. ಜಾಮೀನು ಶರತ್ತು ಅದಾಗಿರಬಾರದು ಎಂದು ಪೀಠ ಹೇಳಿದೆ.
ಟ್ವಿಟರ್ ಸಂಪರ್ಕ ಮಾಧ್ಯಮವಾಗಿದೆ. ತಪ್ಪು, ತಿರುಚುವುದಕ್ಕೆ ತಡೆ ಇದೆಯೇ ಹೊರತು ಅಲ್ಲಿ ಏನೂ ಪ್ರಕಟಿಸಬಾರದು ಎಂದು ಯಾರಿಗೂ ತಡೆ ವಿಧಿಸುವಂತಿಲ್ಲ. ವಕೀಲರ ವಾದದಂತೆ ಅದು ಅವರ ವೃತ್ತಿ” ಎಂದು ಪೀಠ ಸ್ಪಷ್ಟಪಡಿಸಿತು.
ದಿಲ್ಲಿ ಪೊಲೀಸರ ವಿಶೇಷ ಘಟಕ, ಎಫ್ ಐಆರ್ ಸಲ್ಲಿಸಿ ಬಂಧಿಸಿದೆ. ಅದನ್ನೇ ಉತ್ತರ ಪ್ರದೇಶದ ಎಲ್ಲ ಕಡೆಗೆ ಕಾಪಿ ಪೇಸ್ಟ್ ಮಾಡಿದ್ದರ ಉದ್ದೇಶವೇನು? ಬೇರೆಯೇ ಪ್ರಕರಣ ಇದ್ದರೆ ಸರಿ, ಆದರೆ ಹಾಗಿಲ್ಲವಲ್ಲ ಎಂದು ಪೀಠ ಹೇಳಿದೆ.
ಹಾಗೆಂದು ಸರ್ವೋಚ್ಚ ನ್ಯಾಯಾಲಯವು ಝುಬೈರ್ ಮೇಲಿನ ಮೊಕದ್ದಮೆಯನ್ನು ವಜಾ ಮಾಡಲಿಲ್ಲ. ಅದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅಲ್ಲಿಯೇ ಅವರು ಆ ಬಗ್ಗೆ ಮನವಿ ಮಾಡಬೇಕು ಎಂದು ಪೀಠ ಹೇಳಿದೆ.