ದೇಶಾದ್ಯಂತ ಪಿಎಫ್ ಐ ಸದಸ್ಯರ ಬಂಧನ, ದಾಳಿ ಖಂಡನೀಯ: ಬಹುತ್ವ ಕರ್ನಾಟಕ

Prasthutha|

ಬೆಂಗಳೂರು: ಎನ್ ಐಎ, ಇಡಿ ಮತ್ತು ಪೊಲೀಸರು ದೇಶದೆಲ್ಲೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾನಾ ಕಚೇರಿಗಳ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಸರಕಾರದ ಏಜೆನ್ಸಿಗಳನ್ನು ದುರುಪಯೋಗಿಸಿಕೊಂಡು ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಈ ದಾಳಿಗಳು ಭಾರತದ ಪ್ರಜಾಪ್ರಭುತ್ವವನ್ನು ನಾಶ ಪಡಿಸಲು ಹೊರಟಿರುವ ಶಕ್ತಿಗಳ ನಿರಂತರ ದಮನಕಾರಿ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಬಹುತ್ವ ಕರ್ನಾಟಕ ಟೀಕಿಸಿದೆ.

- Advertisement -

ಅಪರಾಧ ತಡೆ ದಾಳಿಗಳಿವು ಎನ್ನುವುದು ಸಂಶಯಾಸ್ಪದ ಸಂಗತಿಯಾಗಿದೆ. ಕರ್ನಾಟಕದ ಕೆ. ಜಿ. ಹಳ್ಳಿಯಲ್ಲಿ ದಾಖಲಾದ ಎಫ್ಐಆರ್ 0328/2022 ಅಪರಾಧ ವಿಭಾಗದ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ದಾಖಲಾಗಿದೆ. “ನನಗೆ 2021ರ ಸೆಪ್ಟೆಂಬರ್ ನಲ್ಲಿ ಬಂದ ಮಾಹಿತಿಯಂತೆ, ಪಿಎಫ್ಐ ಸಮುದಾಯಗಳಲ್ಲಿ ವೈರತ್ವ ಹುಟ್ಟು ಹಾಕಲು ಸಂಘಟಿತ ಸಂಚಿನ ಮೂಲಕ ಮುಸ್ಲಿಂ ಯುವಕರನ್ನು ಎತ್ತಿ ಕಟ್ಟುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ. ಆದರೆ ಆ ದೂರು ಯಾವುದೇ ನಿಶ್ಚಿತ ಘಟನೆಯನ್ನು ಹೇಳದೆ, ಊಹೆಯ, ಹೇಳಿಕೆಯ ಆಧಾರದ ಮೇಲೆ ಇದೆ. ಅಂತಹ ದೂರಿನ ಮೇಲೆ ಯಾವುದೇ ಅಪರಾಧ ನಡೆಯದೆಯೇ ದಾಳಿ ನಡೆಸುವುದು, ಬಂಧಿಸುವುದು ಸಾಧುವೆ? ಎಂದು ಬಹುತ್ವ ಕರ್ನಾಟಕ ಪ್ರಶ್ನಿಸಿದೆ.

ಯಾವುದೇ ಸ್ಪಷ್ಟ ಅಪರಾಧ ಇಲ್ಲದೆಯೇ ಎಲ್ಲ ಮುಸ್ಲಿಂ ಯುವ ಸಮುದಾಯವನ್ನು ಊಹಾತ್ಮಕ ದೂರಿನ ಮೇಲೆ ಸಂಚುಗಾರರು ಎಂದು ಹೇಳುವ ಎಫ್ ಐಆರ್ ನ ಹಿಂದಿನ ಉದ್ದೇಶವೇ ಗೂಬೆ ಕೂರಿಸುವುದಾಗಿರುತ್ತದೆ. ಮತ್ತೆ ಮತ್ತೆ ಮುಸ್ಲಿಂ ಸಮುದಾಯದ ಮೇಲೆ, ಯುವಕರ ಮೇಲೆ, ಪಿಎಫ್ ಐ ಮೇಲೆ ಇಂತಹ ದೂರು ಅಪ್ರಜಾಸತ್ತಾತ್ಮಕವಾಗಿದೆ. ಹಿಂದೆ ಇದೇ ರೀತಿ ಸಿಮಿ ನಿಷೇಧಿಸಿ ಸಾವಿರಾರು ಮಂದಿ ಮುಸ್ಲಿಮರನ್ನು ಬಂಧಿಸಿ ಮುಂದೆ ಹಲವಾರು ವರ್ಷಗಳ ಬಳಿಕ ಏನೂ ಇಲ್ಲದೆ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಬಹುತ್ವ ಕರ್ನಾಟಕ ನೆನಪಿಸಿದೆ.

- Advertisement -

ಯಾವುದೇ ಸರಿಯಾದ ತನಿಖೆ ಇಲ್ಲದೆ, ಸರಕಾರದ ಏಜೆನ್ಸಿಗಳನ್ನು ಬಳಸಿ ಇಸ್ಲಾಮೋಪೋಬಿಯಾ ಎಂಬ ಕಟ್ಟು ಕತೆಯ ಪ್ರಚಾರ ಮಾಡುವ ನೀವು, ಯಶವಂತ ಶಿಂಧೆ ಎಂಬಾತ ನಾಂದೇಡ್ ಕೋರ್ಟಿಗೆ ಅಫಿಡವಿಟ್ ಕೊಟ್ಟರೂ ಸಂಘ ಪರಿವಾರ ಆರೋಪಿಗಳನ್ನು ಏಕೆ ಬಂಧಿಸಿಲ್ಲ? 1990ರಿಂದಲೂ ಸಂಘಪರಿವಾರ ಇಂಥ ಸಂಚಿನಲ್ಲಿ ತೊಡಗಿದ್ದಾಗಿ ಶಿಂಧೆ ಹೇಳಿದ್ದಾನೆ. ಬಿಜೆಪಿ ಚುನಾವಣೆ ಗೆಲ್ಲಲು ಅವರು ಬಾಂಬ್ ಸ್ಫೋಟಿಸಿದ್ದಾಗಿ ಆತ ಬರೆದು ಕೊಟ್ಟಿದ್ದಾನೆ. ಅಂದರೆ ಇಲ್ಲಿ ನ್ಯಾಯ ಎನ್ನುವುದು ಸರಕಾರದ ಪಕ್ಷಪಾತದ ಮೇಲೆ ನೀಡಲಾಗುವುದೋ? ಎಂದು ಅದು ಪ್ರಶ್ನಿಸಿದೆ.

ಪೊಲೀಸ್ ದೌರ್ಜನ್ಯ, ನಕಲಿ ಎನ್ ಕೌಂಟರ್ಗಳು, ಮುಗ್ಧರ ಮೇಲೆ ನಕಲಿ ಮೊಕದ್ದಮೆ, ಜೈಲು ಶಿಕ್ಷೆ, ವಿಚಾರಣಾಧೀನ ಸೆರೆಯಾಳುಗಳ ಮೇಲೆ ಉಗ್ರ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಇತ್ಯಾದಿ ಬಗ್ಗೆ ಪ್ರಚಾರ ಮಾಡುವ ದಲಿತ ಬಂಡಾಯಗಾರರು, ತೀವ್ರ ಎಡ ಚಿಂತಕರ ಜೊತೆಗೆ ಪಿಎಫ್ಐ ಸಂಬಂಧ ಹೊಂದಿದೆ ಎಂದು ಎನ್ ಐಎ ಪೂರ್ವಗ್ರಹ ಪೀಡಿತರಾಗಿ ಈ ದಾಳಿ ನಡೆಸಿದ್ದಾರೆ.

ದಲಿತರ ಜೊತೆಗೆ ಕೆಲಸ ಮಾಡುವುದು ಅಪರಾಧವೆ? ಪೊಲೀಸ್ ದೌರ್ಜನ್ಯ ಮತ್ತು ನಕಲಿ ಎನ್ ಕೌಂಟರ್ ಗಳನ್ನು ಖಂಡಿಸುವುದು ತಪ್ಪಾಗುತ್ತದೆಯೆ? ಎಂದು ಅದು ಪ್ರಶ್ನಿಸಿದೆ.

ಪೊಲೀಸ್ ದೌರ್ಜನ್ಯ, ನಕಲಿ ಎನ್ ಕೌಂಟರ್, ಮಾನವ ಹಕ್ಕುಗಳ ದಮನ ಖಂಡಿಸಬಾರದು ಎಂಬ ಸರಕಾರದ ನೀತಿಯು, ಎನ್ ಐಎ ನಿಯಮವು ಸಂವಿಧಾನಕ್ಕೆ ವಿರೋಧವಾದುದು. ಅಲ್ಲದೆ ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಪೌರ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾದುದರ ಸೂಚನೆಯಾಗಿದೆ. ನಾವು ಹಲವು ತಿಂಗಳುಗಳಿಂದ ಗಮನಿಸಿದಂತೆ ಕೇಂದ್ರ ಸರಕಾರವು ಕೇಂದ್ರೀಯ ತನಿಖಾ ದಳಗಳನ್ನು ಅವರನ್ನು ಯಾರೂ ಪ್ರಶ್ನಿಸದಂತೆ ಜನರನ್ನು ಭಯದಲ್ಲಿ ಇಡಲು ಬಳಕೆಯಾಗುತ್ತಿದೆ.

ಬಹುತ್ವ ಕರ್ನಾಟಕವು ಈ ದಾಳಿ ಮತ್ತು ಬಂಧನಗಳನ್ನು ಖಂಡಿಸುತ್ತದೆ ಹಾಗೂ ಇದನ್ನು ನಿಲ್ಲಿಸಿ ಕೂಡಲೆ ಬಂಧಿತರನ್ನು ಬಿಡುಗಡೆ ಮಾಡಲು ಕೋರುತ್ತದೆ. ಭಿನ್ನ ಸ್ವರ ಅಡಗಿಸಲು ಅಮಾನವೀಯ ದಾಳಿಯು ಇಲ್ಲದ ಇಸ್ಲಾಮೋಪೋಬಿಯಾವನ್ನು ಹುಟ್ಟು ಹಾಕುವ ಕೆಲಸವನ್ನಷ್ಟೆ ಮಾಡುತ್ತದೆ. ಇದು ಅಧಿಕಾರದ ಮತ್ತು ದೇಶದ ಏಜೆನ್ಸಿಗಳ ಸ್ಪಷ್ಟ ದುರುಪಯೋಗವಾಗಿದೆ. ಸಂವಿಧಾನದ ಮೂಲಭೂತ ನೀತಿಗಳ ಉಲ್ಲಂಘನೆ, ಕಾನೂನು ಪ್ರಕ್ರಿಯೆಯ ಲೋಪ, ನಾಗರಿಕರನ್ನು ರಕ್ಷಿಸುವಲ್ಲಿ ಆಳುವವರ ವಿಫಲತೆ, ಸಮುದಾಯಗಳ ಅವಹೇಳನ ಒಟ್ಟಾರೆ ಸರ್ವಾಧಿಕಾರಿ ಧೋರಣೆ ಈ ಸರಕಾರದ್ದಾಗಿದೆ ಎಂದು ಬಹುತ್ವ ಕರ್ನಾಟಕ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದೆ.

Join Whatsapp