ನವದೆಹಲಿ: ಪ್ರವಾದಿ ನಿಂದನೆಯ ಫೇಸ್ ಬುಕ್ ಪೋಸ್ಟ್ ಹಾಕಿದ ಕಿಶನ್ ಭರ್ವಾಡ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಪ್ರಮುಖ ಇಸ್ಲಾಮಿಕ್ ವಿದ್ವಾಂಸ, ‘ತಹ್ರೀಕೆ ಫರೋಗೆ ಇಸ್ಲಾಂ’ ನಾಯಕ ಮೌಲಾನಾ ಖಮರ್ ಘನಿ ಉಸ್ಮಾನಿ ಅವರನ್ನು ಗುಜರಾತ್ ಎಟಿಎಸ್ ದೆಹಲಿಯಲ್ಲಿ ಬಂಧಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ವಿರೋಧಿ ಪ್ರಚಾರದ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಲು ಖಮರ್ ಘನಿ ಉಸ್ಮಾನಿ ದೆಹಲಿಗೆ ಬಂದಿದ್ದರು. ಅಹಮದಾಬಾದ್ ನ ದಂಡುಕಾ ನಗರದಲ್ಲಿ ಬೈಕ್ ಸವಾರರ ಗುಂಪೊಂದು 27 ವರ್ಷದ ಕಿಶನ್ ಭರ್ವಾಡ್ ನನ್ನು ಮಂಗಳವಾರ ಗುಂಡಿಕ್ಕಿ ಕೊಂದಿತ್ತು. ಕಿಶನ್ ಭರ್ವಾಡ್ ಜನವರಿ 6 ರಂದು ಹಂಚಿಕೊಂಡಿದ್ದ ವಿವಾದಾತ್ಮಕ ಪೋಸ್ಟ್ ನಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಯಾಗಿದೆ ಎಂದು ಆರೋಪಿಸಿ ಮುಸ್ಲಿಂ ನಾಯಕರು ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಕಿಶನ್ ಹತ್ಯೆ ನಡೆದಿತ್ತು.
ಮೌಲಾನಾ ಖಮರ್ ಘನಿ ಉಸ್ಮಾನಿ ಕಿಶನ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ನಂತರ ಕಿಶನ್ ಹತ್ಯೆಯ ಪ್ರಮುಖ ಆರೋಪಿ ತನ್ನ ಸಹಾಯಕನನ್ನು ಬಳಸಿಕೊಂಡು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಕೊಲೆಯಲ್ಲಿ ನೇರ ಭಾಗಿಯಾಗಿರುವ ಆರೋಪದ ಮೇಲೆ ಶಬೀರ್ (25) ಮತ್ತು ಇಮ್ತಿಯಾಜ್ (27) ಎಂಬಿಬ್ಬರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಉಸ್ಮಾನಿ ಸೇರಿದಂತೆ ಪ್ರಸ್ತುತ ಕೊಲೆ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿದೆ ಮಾಧ್ಯಮಗಳು ವರದಿ ಮಾಡಿವೆ.
ಗುಜರಾತ್ ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣವನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ವಹಿಸಿಕೊಂಡ 24 ಗಂಟೆಗಳ ನಂತರ ಉಸ್ಮಾನಿಯವರ ಬಂಧನವಾಗಿದೆ. ಉಸ್ಮಾನಿಯವರ ಭಾಷಣದಿಂದ ಪ್ರೇರಿತರಾಗಿ ಕಿಶನ್ ನನ್ನು ಕೊಲೆ ಮಾಡಿರುವುದಾಗಿ ಯುವಕರು ಒಪ್ಪಿಕೊಂಡಿದ್ದಾರೆ ಎಂದು ಭಯೋತ್ಪಾದಕ ನಿಗ್ರಹ ದಳದ ಪೋಲೀಸರು ಹೇಳಿದ್ದಾರೆ.
ಜನವರಿ 29 ರಂದು ಪ್ರಕರಣವನ್ನು ಕೈಗೆತ್ತಿಕೊಂಡ 24 ಗಂಟೆಗಳಲ್ಲಿ ಉಸ್ಮಾನಿ ಅವರ ಬಂಧನವು ಪೂರ್ವ ನಿಯೋಜಿತ ಕೃತ್ಯವೆಂದು ಭಾವಿಸಬಹುದಾಗಿದೆ ಎಂದು ಅಲ್ ರಝಾ ನೆಟ್ ವರ್ಕ್ ನ ಪ್ರಧಾನ ಸಂಪಾದಕ ಅಹ್ಮದ್ ರಝಾ ಸ್ವಾಬಿರಿ ಹೇಳಿದರು.
2021ರಲ್ಲಿ ತ್ರಿಪುರಾದಲ್ಲಿ ನಡೆದ ನರಮೇಧದ ವಿರುದ್ಧ ಪ್ರತಿಭಟನೆ ನಡೆಸಿದ ಖಮರ್ ಘನಿ ಉಸ್ಮಾನಿ ಮತ್ತು ಮೂವರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದರು. 21 ದಿನಗಳ ಜೈಲು ವಾಸದ ನಂತರ ಅವರಿಗೆ ಜಾಮೀನು ನೀಡಲಾಗಿತ್ತು.