ಮುಂಬೈ : ‘ರಿಪಬ್ಲಿಕ್ ಟಿವಿ’ ಪ್ರಧಾನ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಆತನ ಪತ್ನಿ ಸಮ್ಯಬ್ರತಾ ರಾಯ್ ಗೆ ಈಗ ಮತ್ತೊಮ್ಮೆ ಬಂಧನದ ಭೀತಿ ಎದುರಾಗಿದೆ. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪ ದಾಖಲಾಗಿರುವ ಹಿನ್ನೆಲೆಯಲ್ಲಿ, ಬಂಧನಪೂರ್ವ ಜಾಮೀನು ಪಡೆಯಲು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಗೋಸ್ವಾಮಿ ಬಂಧನವಾಗಿತ್ತು. ಸ್ಥಳೀಯ ಹಾಗೂ ಹೈಕೋರ್ಟ್ ನಲ್ಲಿ ಆತನಿಗೆ ಜಾಮೀನು ನಿರಾಕರಿಸಲಾಗಿತ್ತಾದರೂ, ಬುಧವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಂಧನವಾದಾಗ ಗೋಸ್ವಾಮಿ ಮತ್ತು ಆತನ ಕುಟುಂಬ ದೊಡ್ಡ ಹೈಡ್ರಾಮ ನಡೆಸಿತ್ತು. ಈ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಗೋಸ್ವಾಮಿ ವಿರುದ್ಧ ಐಪಿಸಿ ಕಲಂ 353, 504, 506 ಮತ್ತು 34ರನ್ವಯ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕ ಸೇವಾಧಿಕಾರಿಯ ಮೇಲೆ ಹಲ್ಲೆ, ಶಾಂತಿ ಭಂಗ, ಕ್ರಿಮಿನಲ್ ಬೆದರಿಕೆ ಆರೋಪಗಳು ಈ ಕಲಂಗಳಡಿ ದಾಖಲಾಗಿವೆ.
ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ಮುಂಬೈಯ ತಲೋಜ ಜೈಲಿನಿಂದ ಬಿಡುಗಡೆಗೊಂಡ ಕೆಲವೇ ಹೊತ್ತಿನಲ್ಲಿ ಗೋಸ್ವಾಮಿ ದಂಪತಿ ಬಂಧನಪೂರ್ವ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.