ನವದೆಹಲಿ : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಸೋರಿಕೆಯಾದ ವಾಟ್ಸಪ್ ಚಾಟ್ ನ ಮಾಹಿತಿಗಳ ಬಗ್ಗೆ ಕೇಂದ್ರ ಸರಕಾರ ಮೌನವಾಗಿರುವುದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವ್ಯಾಪಕವಾಗಿ ರಾಜಿ ಮಾಡಿಕೊಳ್ಳಲಾಗಿದೆ. ಇತ್ತೀಚೆಗಿನ ಬೆಳವಣಿಗೆಗಳು ಆಘಾತಕಾರಿಯಾಗಿವೆ ಎಂದು ಅವರು ಹೇಳಿದ್ದಾರೆ.
“ರಾಷ್ಟ್ರಿಯ ಭದ್ರತೆಯಲ್ಲಿ ಹೇಗೆ ವ್ಯಾಪಕವಾಗಿ ರಾಜಿ ಮಾಡಿಕೊಳ್ಳಲಾಗಿದೆ ಎನ್ನುವ ಇತ್ತೀಚಿನ ವರದಿಗಳು ದಿಗಿಲು ಹುಟ್ಟಿಸುತ್ತವೆ. ಕೆಲವು ದಿನಗಳ ಹಿಂದೆ ಆಂಟನಿ ಅವರು (ಮಾಜಿ ರಕ್ಷಣಾ ಸಚಿವ) ಸೇನಾ ಕಾರ್ಯಾಚರಣೆ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹ ಎಂದು ಹೇಳಿದ್ದರು. ಆದರೂ ಕೇಂದ್ರ ಸರಕಾರದ ಕಡೆಯಿಂದ ಮೌನವೇ ಕಂಡುಬರುತ್ತಿದ್ದು, ಇದು ಕಿವುಡುತನ ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಇತರರಿಗೆ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಗ್ಗೆ ಪ್ರಮಾಣಪತ್ರ ನೀಡುತ್ತಿದ್ದವರ ಮುಖ ಸಂಪೂರ್ಣವಾಗಿ ಬಹಿರಂಗವಾಗಿದೆ” ಎಂದು ಅವರು ಅರ್ನಾಬ್ ವಿರುದ್ಧ ಕಿಡಿಗಾರಿದ್ದಾರೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸಲು ಸಂಸತ್ ನಲ್ಲಿ ಅವಕಾಶ ಸಿಗಬೇಕು ಎಂದು ಅವರು ಹೇಳಿದ್ದಾರೆ.