ನವದೆಹಲಿ : ‘ರಿಪಬ್ಲಿಕ್ ಟಿವಿ’ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಕೇಂದ್ರ ಸರಕಾರ ರಕ್ಷಿಸುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆಪಾದಿಸಿದ್ದಾರೆ. ಈ ಕುರಿತು ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ರಾವತ್, ‘ಅರ್ನಾಬ್ ಗೋಸ್ವಾಮಿಯನ್ನು ರಚಿಸುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು” ಎಂದು ಅವರು ಹೇಳಿದ್ದಾರೆ.
ಅರ್ನಾಬ್ ಗೋಸ್ವಾಮಿ ಅವರದ್ದೆನ್ನಲಾದ ವಾಟ್ಸಪ್ ಚಾಟ್ ಸಂದೇಶಗಳ ಕುರಿತ ವಿವಾದಕ್ಕೆ ಸಂಬಂಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ರೈತರ ಪ್ರತಿಭಟನೆಯನ್ನು ಸರಕಾರ ನಿಭಾಯಿಸಿದ ರೀತಿ, ಹಲವು ನಾಯಕರು ಮತ್ತು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದಕ್ಕೆ ಅವರು ಕಿಡಿಗಾರಿದರು.
“ಹಾಗಾದರೆ ಅವರನ್ನು ನೀವು ದೇಶದ್ರೋಹಿಗಳೆಂದು ಕರೆಯುತ್ತೀರಿ? ಅವರು ದೇಶದ್ರೋಹಿಗಳೇ? ಹಾಗಾದರೆ, ನಮ್ಮ ದೇಶದಲ್ಲಿ ದೇಶಭಕ್ತರು ಯಾರು? ಅರ್ನಾಬ್ ಗೋಸ್ವಾಮಿ? ಕಂಗನಾ ರಣಾವತ್?” ಎಂದು ಅವರು ಪ್ರಶ್ನಿಸಿದ್ದಾರೆ.
“ಯಾರಿಂದಾಗಿ ಮಹಾರಾಷ್ಟ್ರದಲ್ಲಿ ಓರ್ವ ಅಮಾಯಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೋ, ಯಾರಿಂದಾಗಿ ದೇಶದ ಅಧಿಕೃತ ಗೌಪ್ಯತಾ ವಿಚಾರಗಳು ಸೋರಿಕೆಯಾದವೋ ಅವರು ನಿಮ್ಮ ಸೇವೆಯಲ್ಲಿದ್ದಾರೆ, ನಿಮ್ಮ ರಕ್ಷಣೆಯಲ್ಲಿದ್ದಾರೆ. ಇದು ದೇಶದ ಭದ್ರತೆಯ ವಿಚಾರ, ನೀವು ಈ ಕುರಿತು ಮಾತನಾಡುವುದಿಲ್ಲ” ಎಂದು ರಾವತ್ ಗುಡುಗಿದರು.
ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿ ನಟ ದೀಪ್ ಸಿಧು ಬಂಧನವಾಗದಿರುವುದಕ್ಕೆ ಆಕ್ಷೇಪಿಸಿದ ರಾವತ್, “ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಯಿತು ಎಂದು ಪ್ರಧಾನಿ ಬೇಸರಪಟ್ಟರು. ಇಡೀ ದೇಶ ಬೇಸರಪಟ್ಟಿತು. ಆದರೆ, ಕೆಂಪುಕೋಟೆಯಲ್ಲಿ ಯಾರು ಅವಮಾನ ಮಾಡಿದ್ದರು? ದೀಪ್ ಸಿಧು, ಆತ ಯಾರು? ಆತ ಯಾರಿಗಾಗಿ ಕೆಲಸ ಮಾಡುತ್ತಿದ್ದಾನೆ? ನೀವು ಅದರ ಬಗ್ಗೆ ಏನೂ ಹೇಳುತ್ತಿಲ್ಲ” ಎಂದು ರಾವತ್ ತಿಳಿಸಿದರು.