ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ| ಸಶಸ್ತ್ರ ಪಡೆಗಳ ಮಾಜಿ ಮುಖ್ಯಸ್ಥರಿಂದ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

Prasthutha|

ಹೊಸದಿಲ್ಲಿ: ಮುಸ್ಲಿಮರ ವಿರದ್ಧ ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿರುವುದರ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಸಶಸ್ತ್ರ ಪಡೆಗಳ ಐದು ಮಾಜಿ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪತ್ರ ಬರೆದಿದ್ದಾರೆ.

- Advertisement -

ಇತ್ತೀಚೆಗೆ ಉತ್ತರಾಖಂಡದ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡಲಾಗಿತ್ತು.

“ಹಿಂಸಾಚಾರದ ಇಂತಹ ಕರೆಗಳು ಆಂತರಿಕವಾಗಿ ಅಸಾಮರಸ್ಯವನ್ನುಂಟುಮಾಡಿ ಬಾಹ್ಯ ಶಕ್ತಿಗಳಿಗೆ ಧೈರ್ಯ ತುಂಬಬಹುದು ಎಂದು ದೇಶದ ಗಡಿಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ ಪತ್ರದಲ್ಲಿ ಎಚ್ಚರಿಸಲಾಗಿದೆ. ಮಾಜಿ ಅಧಿಕಾರಿಗಳು ಬರೆದ ಪತ್ರದಲ್ಲಿ ಕ್ರಿಶ್ಚಿಯನ್ನರು, ದಲಿತರು ಮತ್ತು ಸಿಖ್ಖರಂತಹ ಇತರ ಅಲ್ಪಸಂಖ್ಯಾತರನ್ನು ಹಿಂದುತ್ವವಾದಿಗಳು ಗುರಿಯಾಗಿಸಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.

- Advertisement -

“ರಾಷ್ಟ್ರದೊಳಗೆ ಶಾಂತಿ ಮತ್ತು ಸೌಹಾರ್ದತೆಯ ಯಾವುದೇ ಉಲ್ಲಂಘನೆಯು ದುಷ್ಟ ಬಾಹ್ಯ ಶಕ್ತಿಗಳನ್ನು ಉತ್ತೇಜಿಸುತ್ತದೆ. ಯಾವುದೇ ಸಮುದಾಯದ ವಿರುದ್ಧ ಹಿಂಸಾಚಾರಕ್ಕಾಗಿ ಇಂತಹ ಅಬ್ಬರದ ಕರೆಗಳಿಗೆ ಅನುಮತಿ ನೀಡಿದರೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಪೊಲೀಸ್ ಪಡೆಗಳು ಸೇರಿದಂತೆ ಸಮವಸ್ತ್ರದಲ್ಲಿರುವ ನಮ್ಮ ಸೈನಿಕರ ಏಕತೆ ಮತ್ತು ಒಗ್ಗಟ್ಟಿಗೆ ಗಂಭೀರವಾಗಿ ಪರಿಣಾಮ ಬೀರುತ್ತದೆ” ಎಂದು ಪತ್ರ ಹೇಳಿದೆ.

ಹರಿದ್ವಾರದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಬಹಿರಂಗ ಕರೆ ನೀಡಿದ “ಧರ್ಮ ಸಂಸದ್” ಅನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, “ಹಿಂದೂಗಳ ಧರ್ಮ ಸಂಸದ್ ಎಂಬ 3 ದಿನಗಳ ಧಾರ್ಮಿಕ ಸಮಾವೇಶದಲ್ಲಿ ಮಾಡಿದ ಭಾಷಣಗಳಿಂದಾಗಿ ನಾವು ಗಂಭೀರವಾಗಿ ವಿಚಲಿತರಾಗಿದ್ದೇವೆ. 2021 ರ ಡಿಸೆಂಬರ್ 17-19 ರ ನಡುವೆ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಧರ್ಮವನ್ನು ರಕ್ಷಿಸುವ ನೆಪದಲ್ಲಿ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡು ಭಾರತದ ಮುಸ್ಲಿಮರನ್ನು ಕೊಲ್ಲಲು ಕರೆ ನೀಡಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

Join Whatsapp