ಬೆಂಗಳೂರು: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ತಾಯಿ, ಮಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆ ಗೋವಿಂದಪುರದಲ್ಲಿ ನಡೆದಿದೆ.
ಗೋವಿಂದಪುರದ ದಿವ್ಯಾ (34) ಹಾಗೂ ಆಕೆಯ ಮಗಳು ರಿತ್ಯಾ(13) ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರೂ ಮನೆಯಲ್ಲಿ ಒಂದೇ ಫ್ಯಾನ್ ಗೆ ಜೊತೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕೊರಳೊಡ್ಡುವ ಮೂಲಕ ಅಂತ್ಯವಾಗಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಖಾಸಗಿ ಶಾಲೆಯೊಂದರಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಹೋಗುತ್ತಿದ್ದ ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಇತ್ತ ಉಸಿರಾಟ ಸಂಬಂಧದ ಕಾಯಿಲೆಯಿಂದ ದಿವ್ಯಾ ಬಳಲುತ್ತಿದ್ದರು. ಈ ಮಧ್ಯೆ ವೈದ್ಯ ರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದಿದ್ದರು. ಹೀಗಾಗಿ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ-ಮಾವನಿಗೆ ದಿವ್ಯಾ ಹೇಳಿದ್ದರು ಎನ್ನಲಾಗಿದೆ.
ಆದರೆ ನಾಯಿಯನ್ನು ಮನೆಯಿಂದ ಕಳಿಸಲು ಅತ್ತೆ-ಮಾವ ಒಪ್ಪಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ-ಮಾವನ ನಡುವೆ ಗಲಾಟೆ ನಡೆದಿದೆ. ಇದರಿಂದ ಮನನೊಂದ ದಿವ್ಯಾ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.