ಅರ್ಜೆಂಟೀನಾ ಉಪಾಧ್ಯಕ್ಷೆಗೆ ಗುಂಡು ಹಾರಿಸಿದ ದುಷ್ಕರ್ಮಿ: ಸ್ವಲ್ಪದರಲ್ಲೇ ಪಾರು

Prasthutha|

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡೆಜ್ ಮೇಲೆ ದುಷ್ಕರ್ಮಿಯೋರ್ವ ಗುಂಡು ಹಾರಿಸಿದ್ದು, ಸ್ವಲ್ಪದರಲ್ಲೇ ಗುರಿ ತಪ್ಪಿದೆ ಎಂದು ರಾಷ್ಟ್ರಾಧ್ಯಕ್ಷರು ತಿಳಿಸಿದ್ದಾರೆ.

- Advertisement -

ಗುರುವಾರ ರಾತ್ರಿ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ ತಕ್ಷಣ ದುಷ್ಕರ್ಮಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹತ್ಯೆಗೆ ಯತ್ನಿಸಿದಾಗ ಪಿಸ್ತೂಲಿನಿಂದ ಮೊದಲ ಗುಂಡು ಹಾರಲಿಲ್ಲ, ಎರಡನೆಯ ಪ್ರಯತ್ನವನ್ನು ಭದ್ರತಾ ಸಿಬ್ಬಂದಿ ಗುರಿ ತಪ್ಪಿಸಿದರು ಎಂದು ಅಧ್ಯಕ್ಷ ಆಲ್ಬರ್ಟೋ ಫೆರ್ನಾಂಡೆಜ್ ಹೇಳಿದ್ದಾರೆ.

- Advertisement -

ಪಿಸ್ತೂಲ್ ನಲ್ಲಿ 5 ಗುಂಡುಗಳಿದ್ದವು, ಟ್ರಿಗ್ಗರ್ ಎಳೆದಾಗ ಮೊದಲ ಗುಂಡು ಹಾರಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇತ್ತು. ಉಪಾಧ್ಯಕ್ಷರಿಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಆತ ನುಗ್ಗಿ ಬಂದ, ಅವನ ಕೈಯಲ್ಲಿ ಹ್ಯಾಂಡ್ ಗನ್ ಎಂದು ಗೊತ್ತಾಗುವುದರೊಳಗೆ ಹಣೆಗೆ ಗುರಿಯಿಟ್ಟು ಟ್ರಿಗ್ಗರ್ ಎಳೆದಿದ್ದಾನೆ. ಆದರೆ ಶಬ್ದ ಬಂದರೂ ಗುಂಡು ಹಾರಲಿಲ್ಲ” ಎಂದು ಪ್ರತ್ಯಕ್ಷದರ್ಶಿ ಗಿನಾ ಡೆ ಬಾಯಿ, ಎಸೋಸಿಯೇಟೆಡ್ ಪ್ರೆಸ್ ಗೆ  ಹೇಳಿದ್ದಾರೆ.

“ಮಿಲಿಟರಿ ಸರ್ವಾಧಿಕಾರದ ಬಳಿಕ 1983ರಲ್ಲಿ ನಾವು ಪ್ರಜಾಪ್ರಭುತ್ವವನ್ನು ಮರಳಿ ಪಡೆದ ಮೇಲೆ ಇದು ತುಂಬ ಗಂಭೀರವಾದ ಘಟನೆ. ಈಗಿನ ಉಪಾಧ್ಯಕ್ಷೆ 2007- 15ರಲ್ಲಿ ಅಧ್ಯಕ್ಷರಾಗಿದ್ದಾಗ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಯ ವೇಳೆ ಈ ಹತ್ಯೆ ಯತ್ನ ನಡೆದಿದೆ. ಅರ್ಜೆಂಟೀನಾದ ರಾಜಧಾನಿಯ ರೆಕೋಲೆಟಾ ಪ್ರದೇಶದ ಮನೆಯ ಸುತ್ತ ಆಕೆಯ ಬೆಂಬಲಿಗರು ಸುತ್ತುವರಿದಿದ್ದಾಗ ಈ ದುರ್ಘಟನೆ ನಡೆದಿದೆ” ಎಂದು ಆಲ್ಬರ್ಟೋ ಹೇಳಿದರು.

ಬೆಂಬಲಿಗರು ಸುತ್ತುವರಿದಿರಲು ಕ್ರಿಸ್ಟಿನಾ ಹೊರ ಬರುವುದು, ಹಂತಕ ನುಗ್ಗಿದ್ದು ಎಲ್ಲವೂ ವೀಡಿಯೋದಲ್ಲಿ ಸ್ಪಷ್ಟವಾಗಿದ್ದು, ಟೀವಿಗಳಲ್ಲಿ ಪ್ರಸಾರವಾಗಿದೆ. ಜಾಲ ತಾಣದಲ್ಲಿ ಬಂದ ವೀಡಿಯೋದಂತೆ ಪಿಸ್ತೂಲಿನ ತುದಿ ಹೆಚ್ಚು ಕಡಿಮೆ ಕ್ರಿಸ್ಟಿನಾರ ಹಣೆಗೆ ತಾಕುವಂತಿತ್ತು.

ಸೆಪ್ಟೆಂಬರ್ 2ರ ಶುಕ್ರವಾರ ರಜೆ ಘೋಷಿಸಿರುವ ಅಧ್ಯಕ್ಷರು ಜನರು ಶಾಂತಿ ನೆಮ್ಮದಿ ಕಾಪಾಡಬೇಕು, ಪ್ರಜಾಪ್ರಭುತ್ವದತ್ತ ಒಗ್ಗಟ್ಟು ತೋರಬೇಕು ಎಂದಿದ್ದಾರೆ.

ಕ್ರಿಸ್ಟಿನಾ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಡೆದ ಭ್ರಷ್ಟಾಚಾರಕ್ಕೆ 12 ವರ್ಷ ಜೈಲು ಶಿಕ್ಷೆ ವಿಧಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಕರೆ ನೀಡಿದ ಒಂದು ವಾರದಿಂದ ಅವರ ಮನೆಯ ಸುತ್ತ ಮುತ್ತ ಬೆಂಬಲಿಗರು ಸದಾ ಮುತ್ತಿಕೊಂಡಿದ್ದಾರೆ. 

“ಸಂವಾದಕ್ಕೆ ಎದುರಾಗಿ ದ್ವೇಷ ಮತ್ತು ಹಿಂಸೆ ತಲೆಯೆತ್ತಿದಾಗ ಇಂಥ ಹತ್ಯೆಯ ಯತ್ನಗಳು ನಡೆಯುತ್ತವೆ, ಇವು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತವೆ” ಎಂದು ಹಣಕಾಸು ಮಂತ್ರಿ ಸೆರ್ಗಯೋ ಮಸಾ ಪ್ರತಿಕ್ರಿಯಿಸಿದ್ದಾರೆ.

“ಇಂದು ಏನು ನಡೆಯಿತೋ ಅದು ಪ್ರಜಾಪ್ರಭುತ್ವವನ್ನು, ಕಾನೂನು ಸುವ್ಯವಸ್ಥೆಯನ್ನು, ಸಂಸ್ಥೆಗಳನ್ನು ಕೊಲೆ ಮಾಡುವ ಪ್ರಯತ್ನವಾಗಿದೆ” ಎಂದು ಸಂಪುಟ ಸಮಿತಿಯು ಕೊಲೆ ಪ್ರಯತ್ನವನ್ನು ಖಂಡಿಸಿದೆ.

ಮಾಜಿ ಅಧ್ಯಕ್ಷ ಸಂಪ್ರದಾಯವಾದಿ ಪಕ್ಷದ ಮೌರಿಸಿಯೋ ಮಾಕ್ರಿ ಅವರೂ ಘಟನೆಯನ್ನು ಖಂಡಿಸಿ, ಆಳುತ್ತಿರುವ ಮಧ್ಯಮ ಕಮ್ಮೂನಿಸ್ಟ್ ವಾದಿ ಸರಕಾರವು ಕೂಡಲೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

ಪೊಲೀಸರ ಜೊತೆಗೆ ಉಪಾಧ್ಯಕ್ಷೆಯ ಬೆಂಬಲಿಗರು ಕೈ ಮಿಲಾಯಿಸಿದ್ದು ಕೂಡ ನಡೆದಿದೆ. ಉಪಾಧ್ಯಕ್ಷೆರ ಮನೆಯ ಸುತ್ತ ಇದ್ದ ಪೊಲೀಸ್ ಬಂದೋಬಸ್ತು ಕಡಿಮೆ ಆದದ್ದೇಕೆ ಎನ್ನುವುದು ಅವರ ತಕರಾರು.

ಪ್ರತಿ ದಿನ ಬೆಳಗ್ಗೆ ಮನೆಯಿಂದ ಹೊರ ಬರುವ ಕ್ರಿಸ್ಟಿನಾ ಅವರು ಆಟೋಗ್ರಾಫ್ ನೀಡುತ್ತ ಬೆಂಬಲಿಗರ ನಡುವೆ ಸೆನೆಟ್ ಗೆ ಬರುತ್ತಾರೆ. ಸಂಜೆ ಸಹ ಒಮ್ಮೆ ಹಾಗೆಯೇ ಮಾಡುತ್ತಾರೆ.

ಪ್ರತಿಪಕ್ಷದವರ ದ್ವೇಷ ಭಾಷಣವೇ ಈ ಘಟನೆಗೆ ಕಾರಣ ಎಂದು ಕ್ರಿಸ್ಟಿನಾ ಬೆಂಬಲಿಗರು ದೂರಿದ್ದಾರೆ.

“ ಅರ್ಜೆಂಟೀನಾದ ಮಟ್ಟಿಗೆ ಇದು ಅತಿ ದುಃಖದ ದಿನ” ಎಂದು ಬ್ಯೂನೆಸ್ ಐರಿಸ್ ಗವರ್ನರ್ ಆಕ್ಸೆಲ್ ಕಿಸಿಲ್ ಹೇಳಿದ್ದಾರೆ.

ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಾಡುರೊ ಸಹಿತ ನೆರೆಹೊರೆಯ ದೇಶಗಳ ನಾಯಕರು ಸಹ, ಇಂತಹ ಸಂದರ್ಭದಲ್ಲಿ ನಾವು ಉಪಾಧ್ಯಕ್ಷೆಯ ಜೊತೆಗೆ ಒಗ್ಗಟ್ಟಿನ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಮತ್ತೆ ಚುನಾವಣೆಗೆ ಸ್ಪರ್ಧಿಸಿರುವ ಬ್ರೆಜಿಲ್ ನ ಮಾಜಿ ಅಧ್ಯಕ್ಷರಾದ ಲುವಿಜ್ ಇನಾಸಿಯೋ ಲುಲಾ ಡಿ ಸಿಲ್ವಾ, ಭಿನ್ನಾಭಿಪ್ರಾಯ ಮತ್ತು ವೈವಿಧ್ಯತೆಯನ್ನು ಗೌರವಿಸಿ ಎಂದು ಕ್ರಿಸ್ಟಿನಾರಿಗೆ ಬೆಂಬಲ ಸೂಚಿಸಿದ್ದಾರೆ.



Join Whatsapp