ಆಟೋ ರಿಕ್ಷಾ ರಹದಾರಿ ವಿತರಣೆಯಲ್ಲಿ ಭ್ರಷ್ಟಾಚಾರ ಖಂಡಿಸಿ ಎಆರ್ ಡಿಯು ಪ್ರತಿಭಟನೆ

Prasthutha|


ಬೆಂಗಳೂರು : ರಹದಾರಿ ಪತ್ರ ನೀಡಿಕೆಯಲ್ಲಿನ ಭ್ರಷ್ಟಾಚಾರ ಹಾಗೂ ದಲ್ಲಾಳಿಗಳ ಹಾವಳಿಯಿಂದ ತಿಂಗಳುಗಟ್ಟಲೆ ಅಲೆಯುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಸಿಐಟಿಯು ಸಂಯೋಜಿತ) ಸದಸ್ಯರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಶಾಂತಿನಗರ ಬಳಿಯಿರುವ ಸಾರಿಗೆ ಆಯುಕ್ತರ ಕಚೇರಿ ಮುಂಭಾಗ ನೂರಾರು ಆಟೋ ಚಾಲಕರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆಗಳನ್ನು ಕೂಗಿ ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.
ಬೆಂಗಳೂರು ನಗರದಲ್ಲಿ ಸುಮಾರು 1.75 ಲಕ್ಷ ಆಟೋರಿಕ್ಷಾಗಳಿವೆ. ಈ ಹಿಂದೆ ರಹದಾರಿ ಪತ್ರಗಳನ್ನು ನೋಂದಣಿ ಕಚೇರಿಗಳು ನಿರ್ವಹಿಸುತ್ತಿದ್ದವು. ಆಗ ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಯಿಂದ ಆಟೋ ಚಾಲಕರು ಬೇಸತ್ತಿದ್ದರು. ನಿರಂತರ ಪ್ರತಿಭಟನೆಯಿಂದ 2011ರಿಂದ ರಹದಾರಿ ನೀಡಲು ಐಎಂವಿ ಕಾಯ್ದೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಏಕಗವಾಕ್ಷಿ ಸ್ಥಾಪಿಸಿದ ಸಾರಿಗೆ ಇಲಾಖೆಯು ಆ ಮೂಲಕ ರಹದಾರಿ ಪತ್ರಗಳನ್ನು ವಿತರಣೆ ಮಾಡಲು ಕ್ರಮವಹಿಸಿದೆ. ಆದರೂ ಕಚೇರಿಯಲ್ಲಿನ ಭ್ರಷ್ಟಾಚಾರದಿಂದಾಗಿ ಮತ್ತೆ ಚಾಲಕರಿಗೆ ತೊಂದರೆ ಎದುರಾಗಿದೆ. ಅಲ್ಲದೆ ದಲ್ಲಾಳಿ ಹಾವಳಿ ಮಿತಿ ಮೀರಿದೆ ಎಂದು ಎಆರ್ಡಿಯು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಹೇಳಿದರು.
ಎಆರ್ ಡಿಯು ಸಂಘದ ಖಜಾಂಚಿ ಸಂತೋಷ ಕುಮಾರ್ ಮಾತನಾಡಿ ʻಈ ಬಗ್ಗೆ ಕಚೇರಿಯಲ್ಲಿ ಕಾರಣ ಕೇಳಿದರೆ, ಈ ಅಧಿಕಾರಿಯಾಗಿ ಬರುವ ವ್ಯಕ್ತಿಗಳು ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾರಣ ನಾವುಗಳು ಸಹ ಹಣಕೊಟ್ಟು ಈ ಕಚೇರಿಗೆ ಬಂದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸುಮಾರು 10 ವರ್ಷಗಳಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಎಲ್ಲರೂ ಮದ್ಯವರ್ತಿಗಳನ್ನು ಪೋಷಿಸಿ ಹಣ ಮಾಡಿಕೊಂಡಿರುವವರೇ ಆಗಿದ್ದಾರೆʼ ಎಂದು ಆರೋಪ ಮಾಡಿದ್ದಾರೆ. ರಹದಾರಿ ನೀಡುವಲ್ಲಿಯೂ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವಿಚಕ್ರ ವಾಹನ ಪರವಾನಿಗಿಗೂ ರಹದಾರಿ ವಿತರಣೆ ಮಾಡಿರುತ್ತಾರೆ. ಆಟೋರಿಕ್ಷಾ ಎನ್.ಟಿ. ಪರವಾನಿಗಿಗೂ ರಹದಾರಿ ವಿತರಣೆ ಮಾಡಿರುತ್ತಾರೆ. ಒಂದೇ ವಾಹನಕ್ಕೆ ಎರಡೆರಡು ರಹದಾರಿ ವಿತರಣೆ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇಂತಹ ಕೆಟ್ಟ ವಾತಾವರಣದಲ್ಲಿ ಈ ಕಛೇರಿ ಭ್ರಷ್ಟಾಚಾರದ ಕೂಪವಾಗಿದೆ. ಸದ್ಯ 148 ವಾಹನಗಳು ಪರವಾನಗಿ ಬೋಗಸ್ ಆಗಿವೆ ಎಂದು ರಹದಾರಿ ಕಛೇರಿಯ ಸೂಚನ ಫಲಕದಲ್ಲಿಯೂ ಪ್ರದರ್ಶಿಸಿರುತ್ತಾರೆ ಎಂದರು.

- Advertisement -

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ಮನವಿಯನ್ನು ಸ್ವೀಕರಿಸಿ “ಈಗಾಗಲೇ ನಮಗೂ ಸಾಕಷ್ಟು ದೂರುಗಳು ಬಂದಿವೆ. ಅದನ್ನು ಶೀಘ್ರದಲ್ಲಿ ಪರಿಶೀಲಿಸಲಾಗುವುದು. ಇನ್ನೂ ಹೆಚ್ಚಿನ ಅವ್ಯವಹಾರದ ಬಗ್ಗೆ ಮತ್ತಷ್ಟು ನಿಖರ ಮಾಹಿತಿಗಳನ್ನು ನೀಡಿ ಅವುಗಳ ಮೇಲೆ ಕ್ರಮಜರುಗಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಸಭೆಯನ್ನು ನಡೆಸಿ ಸೂಕ್ತ ಕ್ರಮವಹಿಸುತ್ತೇನೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಆರ್ ಡಿಯು ಉಪಾಧ್ಯಕ್ಷರಾದ ಆರ್.ನವೀನ್ ಶೆಣೈ, ಬಸವರಾಜು ಸಿ., ಜಾವೀದ್ ಅಹಮ್ಮದ್, ಕಾರ್ಯದರ್ಶಿಗಳಾದ ಎನ್.ಶ್ರೀನಿವಾಸ್, ನಾಗರಾಜ್ ಎಸ್., ಚಂದ್ರಶೇಖರ್ ಡಿ. ಸೇರಿದಂತೆ ನಗರದ ವಿವಿಧ ವಲಯಗಳ ಆಟೋ ಚಾಲಕರು ಭಾಗವಹಿಸಿದ್ದರು.

Join Whatsapp