ಕೆರೆಯಂತಾದ ಅರಸೀಕೆರೆ; ಭಾರೀ ಮಳೆಗೆ ಅಪಾರ ನಷ್ಟ, ರಸ್ತೆ ಸಂಪರ್ಕ ಕಡಿತ

Prasthutha|

ಹಾಸನ: ಜಿಲ್ಲೆಯ ವಿವಿಧೆಡೆ ಮಳೆ ಆರ್ಭಟಿಸುತ್ತಿದ್ದು, ಸೋಮವಾರ ರಾತ್ರಿ ಇಡೀ ಸುರಿದ ಮಳೆ ನಗರ ಸೇರಿದಂತೆ ತಾಲೂಕಿನ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದು, ಕೋಟ್ಯಂತರ ರೂ.ನಷ್ಟ ಉಂಟಾಗಿದೆ.

- Advertisement -

ಕಳೆದ ಹತ್ತಾರು ವರ್ಷಗಳಿಗೆ ಹೋಲಿಸಿದರೆ ಸೋಮವರಾತ್ರಿ ಸುರಿದ ಮಳೆ ದಾಖಲೆ ಎನಿಸಿದೆ. ಮಳೆ ರೌದ್ರಾವತಾರಕ್ಕೆ ಕಾಟಿಕೆರೆ ಗ್ರಾಮದ ಕೆರೆ ಒಡೆದು ಹೋಗಿದೆ. 10 ವರ್ಷಗಳ ನಂತರ ಮುರುಂಡಿ ಕೆರೆ ಭರ್ತಿಯಾಗಿದ್ದು, ಏರಿ ಕುಸಿಯುವ ಆತಂಕ ಎದುರಾಗಿದೆ. ಇನ್ನು ನಗರ ಸೇರಿದಂತೆ ಗ್ರಾಮೀಣ ಭಾಗದ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮುಂಜಾನೆಯಿಂದಲೂ ಪರಿಶೀಲನೆ ನಡೆಸಿ ನಡೆಸುತ್ತಿದ್ದಾರೆ.

ಮಳೆ ಆರ್ಭಟಕ್ಕೆ  ನಗರದ ರೈಲ್ವೆ ಹಾಗೂ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡು ಅಕ್ಷರಶಃ ಕೆರೆಯಂತಾಗಿದ್ದವು.

- Advertisement -

ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್ ರಸ್ತೆ ಮತ್ತು ಹಾಸನ ರಸ್ತೆಗಳಲ್ಲಿ ಎರಡು ಮೂರು ಅಡಿ ಎತ್ತರ ಮಳೆ ನೀರು ನಿಂತಿದ್ದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಗಂಟೆಗಟ್ಟಲೆ ಕಾಲ ಮಳೆರಾಯನ ದಿಗ್ಬಂಧನ ಎದುರಿಸುವುದು ಅನಿವಾರ್ಯವಾಗಿತ್ತು.

ಇನ್ನು ನಗರ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳಾದ ಮಲ್ಲೇಶ್ವರಂ, ಸುಬ್ರಹ್ಮಣ್ಯ ನಗರ ಕಾಳನಕೊಪ್ಪಲು, ಹಾಸನ ರಸ್ತೆಯ ಎಡ ಹಾಗೂ ಬಲಭಾಗದ ಬಡಾವಣೆಗಳು ಸೇರಿದಂತೆ, ಸರಸ್ವತಿಪುರಂ, ಮುಜಾರ್ ಮೊಹಲ್ಲಾ, ಇಂದಿರಾನಗರ ಹೀಗೆ ನಗರ ವ್ಯಾಪ್ತಿಯ ನೂರಾರು ಮನೆಗಳಿಗೆ ರಾತ್ರಿ ಏಕಾಏಕಿ ಮಳೆ ನೀರು ನುಗ್ಗಿದ್ದರಿಂದ ಆತಂಕದ ನಡುವೆಯೇ ಜನತೆ ರಾತ್ರಿ ಕಳೆದರು.

ಮನೆಯ ಹೊರಗಡೆ ನಿಲ್ಲಿಸಿದ್ದ ವಿಚಕ್ರ ವಾಹನಗಳು ಮಳೆಯ ರಸಕ್ಕೆ ಕೊಚ್ಚಿ ಹೋಗಿದ್ದು ಗೀಜಿಹಳ್ಳಿ ಸಮೀಪ ಹಾದು ಹೋಗಿರುವ ಬೈಪಾಸ್ ರಸ್ತೆಯ ಅಂಡರ್ ಪಾಸ್ ಬಳಿ ಒಮಿನಿ ಕಾರು ನೀರಿನಲ್ಲಿ ಮುಳುಗಿದೆ. ಅನೇಕ ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷ, ಆರ್.ಐ.ಶಿವಾನಂದ್ ಮೊದಲಾದವರಿದ್ದರು.

1993 ಹಾಗೂ 2012 ರಲ್ಲಿ ತುಂಬಿ ಹರಿದಿದ್ದ ಮುರುಂಡಿ ಕೆರೆ, ಒಂದೇ ದಿನ ಸುರಿದ ಮಳೆಗೆ ಈ ವರ್ಷ ಒಡಲು ತುಂಬಿಕೊಂಡಿದೆ. ಎಲ್ಲೆಂದರಲ್ಲಿ ನೀರು ಹರಿದು ಕೆರೆಯ ಪಕ್ಕದ ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಯಾದಾಪುರ-ಮುರುಂಡಿ ಗ್ರಾಮಗಳ ನಡುವಿನ ಸಂಪರ್ಕ ರಸ್ತೆ ಕಡಿತಗೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗಳ ತುಂಬೆಲ್ಲಾ ನೀರು ತುಂಬಿಕೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ. ಮುನೇಶ್ವರ ದೇವಾಲಯದ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಮಳೆ ನೀರು ಪ್ರವೇಶಿಸಿದೆ.

ಬಯಲುಸೀಮೆ ತಾಲೂಕು ಚನ್ನರಾಯಪಟ್ಟಣ ತಾಲೂಕಿನಲ್ಲೂ ವರುಣನ ಆರ್ಭಟ ಜೋರಾಗಿದೆ. ಒಂದು ವಾರದಿಂದ ನಿರಂತರ ಮಳೆಗೆ ಅನೇಕ ಕರೆಗಳು ಕೋಡಿ ಬಿದ್ದಿವೆ. ಸೋಮವಾರ ಸುರಿದ ಹುಚ್ಚು ಮಳೆಗೆ ದಿಂಡಗೂರು ಕೆರೆ ಕೋಡಿ ಬಿದ್ದಿದೆ.

ಈ ನೀರು ತೆಂಗು, ಅಡಕೆ, ಭತ್ತದ ಗದ್ದೆಗೆ ನುಗ್ಗಿರುವುದರಿಂದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಅಲ್ಲದೆ ರಸ್ತೆ ಮೇಲೂ ಸುಮಾರು 1 ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ವಳಗೆರೆ ಸೋಮನಹಳ್ಳಿ- ನಂದೀಪುರ ನಡುವಿನ ಸಂಪರ್ಕ ರಸ್ತೆ ಜಲಾವೃತವಾಗಿದೆ.

ನಗರ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಅಪಾರ ಪ್ರಮಾಣದ ಸಾರ್ವಜನಿಕರ ಆಸ್ತಿ ಹಾನಿಯಾಗಿದೆ. ಕಾಟಿಕೆರೆ ಗ್ರಾಮದ ಕೆರೆ ಒಡೆದು ಹೋಗಿದ್ದು ಮತ್ತೊಂದು ಕೆರೆಗೆ ಹಾನಿ ಆಗುವ ಸಾಧ್ಯತೆ ಇದೆ. ನಾನು ಸಿಬ್ಬಂದಿ ಜೊತೆ ಖುದ್ದು ಭೇಟಿ ನೀಡಿ ಅವಲೋಕನ ನಡೆಸಿದ್ದೇನೆ. ಸಂಜೆ ವೇಳೆಗೆ ಒಟ್ಟು ನಷ್ಟದ ಅಂದಾಜು ಸಿಗಲಿದೆ. ಮಳೆಯಿಂದ ಹಾನಿಗೊಳಗಾದ ನಿರಾಶ್ರಿತರಿಗೆ ಸೂಕ್ತ ಪರಿಹಾರ ಒದಗಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ತಹಸೀಲ್ದಾರ್  ವಿಭಾ ವಿದ್ಯಾ ರಾಥೋಡ್ ತಿಳಿಸಿದರು.

Join Whatsapp