ಅಂಬೇಡ್ಕರ್ ಭವನದ ಉಸ್ತುವಾರಿಗೆ ಅಪರಾಧ ಹಿನ್ನೆಲೆಯವರ ನೇಮಕ: ಸಮನ್ವಯ ಸಮಿತಿ ಕಿಡಿ

Prasthutha|

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ನೇಮಕಾತಿಯಲ್ಲಿ ರಾಜಕೀಯ ತುಂಬಿದೆ ಎಂದು ಮಂಗಳೂರು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆರೋಪಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಅಶೋಕ್ ಕೊಂಚಾಡಿ, ಪರಿಶಿಷ್ಟ ಜಾತಿ/ ಪಂಗಡಗಳ 1995ರ ನಿಯಮ 17ರಂತೆ ದೌರ್ಜನ್ಯಕ್ಕೆ ಒಳಗಾದರಿಗೆ ನ್ಯಾಯ, ಪರಿಹಾರ, ಪುನರ್ವಸತಿ ಇತ್ಯಾದಿಗೆ ಒತ್ತು ಕೊಡಲಾಗಿದೆ. ಆದರೆ ಮಂಗಳೂರಿನ ಅಂಬೇಡ್ಕರ್ ಭವನದ ಉಸ್ತುವಾರಿಗೆ ಅಪರಾಧ ಹಿನ್ನೆಲೆಯ ಕೆಲವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ಭವನದ ಉಸ್ತುವಾರಿಗೆ ಇಬ್ಬರು ರಾಜಕೀಯ ಹಿನ್ನೆಲೆಯ ಕಳಂಕಿತ ವ್ಯಕ್ತಿಗಳನ್ನು ಹಾಕಿದ್ದಾರೆ. ಇವರನ್ನು ಬದಲಿಸಿ ಕೂಡಲೆ ಸಚ್ಚಾರಿತ್ಯವಂತರನ್ನು ನೇಮಿಸಬೇಕು. ಸ್ಥಳೀಯ ಶಾಸಕರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ಅವರ ಹೇಳಿಕೆಯ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಗಳೇ ಸಮಿತಿಗೆ ಬಂದರೆ ಅವರಿಂದ ದಲಿತರಿಗೆ ನ್ಯಾಯ ಸಿಗುವುದು ಅಸಾಧ್ಯ. ಆ ಇಬ್ಬರಿಗೆ ಕೋರ್ಟಿನಲ್ಲಿ ಎರಡು ವರುಷ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ದಂಡ ವಿಧಿಸಲಾಗಿದೆ. ಅವರು ಅದನ್ನು ಪ್ರಶ್ನಿಸಿದ್ದರೂ ಅವರು ಆರೋಪ ಮುಕ್ತರಾಗಿಲ್ಲ. ಹಾಗಿರುವಾಗ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಅಂಥವರನ್ನು ಹೇಗೆ ಸಮಿತಿಗೆ ಹಾಕಿದ್ದಾರೆ ಎಂದು ಅವರು ಪ್ರಶ್ನಿಸಿದರು.

- Advertisement -

ಒಂಬತ್ತು ದಲಿತ ಸಂಘಟನೆ ಹೋರಾಡಿ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ಆಗಿದೆ. ಆದರೆ ಅದಕ್ಕೆ ಯಾವುದೇ ರೀತಿಯಲ್ಲಿ ಧ್ವನಿ ಎತ್ತದವರನ್ನು ಮಾಡಿದ್ದಾರೆ. ಆ ಅಪರಾಧಿ ಮನೋಭಾವದ ಇಬ್ಬರನ್ನು ಕೂಡಲೆ ಬದಲಾಯಿಸಲು ಒತ್ತಾಯಿಸುವುದಾಗಿ ಕೊಂಚಾಡಿ ಹೇಳಿದರು.

ಕೊಲೆ ಯತ್ನದಲ್ಲಿ ಶಿಕ್ಷೆಗೊಳಗಾದವರು ಎಂದು ತಿಳಿದೂ ಆ ಇಬ್ಬರನ್ನು ನೇಮಿಸಿದ್ದು ಯಾವ ನ್ಯಾಯ. ಸುಪ್ರೀಂ ಕೋರ್ಟ್ ನಿಯಮದಂತೆ ಶಿಕ್ಷೆ ಆದವರು ಆರು ವರುಷ ಕಾಲ ಯಾವುದೇ ಹುದ್ದೆ ಅಲಂಕರಿಸುವಂತಿಲ್ಲ ಎಂದಿರುವಾಗ ಈ ನೇಮಕ ತೀರಾ ಅಕ್ರಮ ಎಂದು ಅವರು ಹೇಳಿದರು.

ಅಂಬೇಡ್ಕರ್ ಭವನಕ್ಕೆ ಸ್ಥಳಕ್ಕಾಗಿ ಹೋರಾಡಿದವರು ನಾವು ಒಂಬತ್ತು ದಲಿತ ಸಂಘಟನೆಗಳವರು. ಅದಕ್ಕೆ ಕಲ್ಲು ಹಾಕಲು ನೋಡಿದವರು ಇಂದು ರಬ್ಬರ್ ಸ್ಟ್ಯಾಂಪ್ ಸದಸ್ಯರನ್ನು ನೇಮಿಸಿಕೊಂಡಿದೆ. ಕೂಡಲೆ ಬದಲಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಎಂ. ದೇವದಾಸ್, ರಮೇಶ್ ಕೋಟ್ಯಾನ್, ಅಶೋಕ, ರಘು ಎಕ್ಕಾರ್, ಜಗದೀಶ್ ಪಾಂಡೇಶ್ವರ, ಚಂದ್ರಕುಮಾರ, ಶೇಖರ ಚಿಲಿಂಬಿ, ಗಿರೀಶ್ ಉಲ್ಲಾಳ, ಎಸ್. ಪಿ. ಆನಂದ, ಆನಂದ ಬೆಳ್ಳಾರೆ, ಸೇಸಪ್ಪ ಬೆದ್ರಕಾಡು, ಸರೋಜಿನಿ ಬಂಟ್ವಾಳ, ರೇಣುಕಾ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.



Join Whatsapp