1.1 ಲಕ್ಷ ಮೌಲ್ಯದ ಆ್ಯಪಲ್​ ಐಫೋನ್​ ಆರ್ಡರ್​ ಮಾಡಿದವಳಿಗೆ ಬಂದಿದ್ದೇನು?

Prasthutha|

- Advertisement -

ಬೀಜಿಂಗ್: ಆನ್​ಲೈನ್​ನಲ್ಲಿ ಚಂದ ಕಾಣುವ ಬಟ್ಟೆಯನ್ನು ಆರ್ಡರ್​ ಮಾಡಿದರೆ ಹರಕು ಬಟ್ಟೆ ಮನೆಗೆ ಬರುವ ಎಷ್ಟೋ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ 1.1 ಲಕ್ಷ ಮೌಲ್ಯದ ಐಫೋನ್​ ಆರ್ಡರ್​ ಮಾಡಿದ ಮಹಿಳೆಗೆ ಬಂದಿದ್ದು ಆ್ಯಪಲ್​ ಜ್ಯೂಸ್​!

ಚೀನಾದ ಲಿಯು ಈ ರೀತಿ ಮೋಸಕ್ಕೆ ಒಳಗಾದ ಮಹಿಳೆಯಾಗಿದ್ದಾಳೆ. ಆ್ಯಪಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್​ 12 ಪ್ರೋ ಮ್ಯಾಕ್ಸ್​ ಫೋನನ್ನು ಆ್ಯಪಲ್ ​ನ ಅಧಿಕೃತ ವೆಬ್​ಸೈಟ್​ನಲ್ಲಿ ಈ ಮಹಿಳೆ ಆರ್ಡರ್ ಮಾಡಿದ್ದಳು. ಅದಕ್ಕಾಗಿ 1500 ಡಾಲರ್​ ಅಂದರೆ ಸರಿ ಸುಮಾರು 1.10 ಲಕ್ಷ ರೂಪಾಯಿಯನ್ನು ಅವಳು ಪಾವತಿ ಮಾಡಿದ್ದಳು.

- Advertisement -

ಫೋನ್​ ಆರ್ಡರ್​ ಮಾಡಿದ ನಂತರ ಆ ಫೋನಿನ ಬರುವಿಕೆಗಾಗಿ ಲಿಯು ಕಾದು ಕುಳಿತಿದ್ದಳು. ನಿಗದಿತ ದಿನದಂದು ಫೋನು ಆಕೆಯ ಮನೆಗೆ ಬಂದು ತಲುಪಿದೆ. ಆದರೆ ಫೋನಿರಬೇಕಿದ್ದ ಜಾಗದಲ್ಲಿ ಆ್ಯಪಲ್ ​ ಜ್ಯೂಸ್​ ಕಂಡಿದೆ. ದುಬಾರಿ ಬೆಲೆಯ ಫೋನಿನ ಬದಲಾಗಿ ಕನಿಷ್ಠ ಬೆಲೆಯ ಜ್ಯೂಸನ್ನು ಪಾರ್ಸೆಲ್​ ಮಾಡಲಾಗಿದೆ.

ಈ ವಿಚಾರವನ್ನು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಆ್ಯಪಲ್ ಸಂಸ್ಥೆ ಮತ್ತು ಪಾರ್ಸೆಲ್​ನಲ್ಲಿ ತಂದುಕೊಟ್ಟ ಎಕ್ಸ್ ಪ್ರೆಸ್ ಮೇಲ್ ಸಂಸ್ಥೆಯು ತಾವು ಫೋನನ್ನೇ ಪಾರ್ಸೆಲ್ ಕಳುಹಿಸಿದ್ದಾಗಿ ವಾದಿಸಿವೆ. ಮಹಿಳೆಯು ನೇರವಾಗಿ ಮನೆಗೆ ಆರ್ಡರ್​ ಮಾಡದೆಯೇ ಪಾರ್ಸೆಲ್​ ಲಾಕರ್​ಗೆ ಆರ್ಡರ್​ ಮಾಡಿದ್ದಳು ಎನ್ನಲಾಗಿದೆ. ಈ ಕುರಿತಾಗಿ ಹೆಚ್ಚಿನ ವಿಚಾರಣೆ ನಡೆಸಲು ಎಕ್ಸ್ ಪ್ರೆಸ್ ಮೇಲ್ ಸಂಸ್ಥೆಯು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಿದೆ.

Join Whatsapp