ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಕಿಡಿಗೇಡಿ ಅಪ್ಪಚ್ಚು ರಂಜನ್ ಆಪ್ತ: ಕಾಂಗ್ರೆಸಿಗೆ ಹೆದರಿ ಜಿಲ್ಲೆಯಲ್ಲಿ ನಿಷೇಧಾಜ್ಞೆ: ಟಾಟು ಮೊಣ್ಣಪ್ಪ

Prasthutha|

ಮಡಿಕೇರಿ: ಕಾಂಗ್ರೆಸ್ ಪಕ್ಷದಿಂದ ತಮ್ಮ ಅಸ್ತಿತ್ವ ಬುಡಮೇಲಾಗುವುದು ಖಾತ್ರಿಯಾಗುತ್ತಿದ್ದಂತೆ ಆಡಳಿತರೂಢ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಹೆದರಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿರುವ ಕೊಡಗು ಜಿಲ್ಲಾ ಕಾಂಗ್ರೆಸ್, ತಮ್ಮ ವೈಫಲ್ಯಗಳನ್ನು ಮರೆಮಾಚಲು ಕೊಡಗಿನ ಶಾಸಕರು ಹೇರಿದ ಒತ್ತಡವೇ ಇದಕ್ಕೆ ಕಾರಣ ಎಂದು ಆರೋಪಿಸಿದೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ, ಕಾಂಗ್ರೆಸ್ ವತಿಯಿಂದ ಇದೆ ತಿಂಗಳ 26ರಂದು ನಿಗದಿಯಾಗಿದ್ದ ಮಡಿಕೇರಿ ಚಲೋ ಕೊಡಗಿನ ಶಾಸಕರಿಗೆ ಭಯ ಮೂಡಿಸಿತ್ತು. ಇದನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂಬ ಹಠದಲ್ಲಿದ್ದ ಇಬ್ಬರು ಶಾಸಕರು ಅದೇ ದಿನ ಮಡಿಕೇರಿಯಲ್ಲಿ ಬಿಜೆಪಿ ವತಿಯಿಂದ ಜನಜಾಗೃತಿ ಸಮಾವೇಶವನ್ನು ನಡೆಸುವುದಾಗಿ ಹೇಳಿ ಗೊಂದಲ ಮೂಡಿಸಿದ್ದರು. ಮಡಿಕೇರಿ ಚಲೋ ಕಾರ್ಯಕ್ರಮವನ್ನು ಹತ್ತಿಕ್ಕುವುದೇ ಇವರ ತಂತ್ರವಾಗಿತ್ತು. ಈ ಕಾರ್ಯಕ್ರಮ ನಡೆದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂಬ ಭಯದಿಂದ ಶಾಸಕರು ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತಾಕತ್ತಿದ್ದರೆ ಕಾಂಗ್ರೆಸ್ಸಿಗರು ಆ.26ರಂದು ಮಡಿಕೇರಿಗೆ ಬರಲಿ’ ಎಂದು ಸವಾಲೆಸೆದಿದ್ದ ಶಾಸಕ ಕೆ.ಜಿ ಬೋಪಯ್ಯ ಇದೀಗ ಜಿಲ್ಲಾಡಳಿತ ಮತ್ತು ಸರಕಾರದ ಮೇಲೆ ಒತ್ತಡ ಹೇರಿ ಮಡಿಕೇರಿ ಚಲೋ ಕಾರ್ಯಕ್ರಮ ನಡೆಯದಂತೆ ನಿಷೇಧಾಜ್ಞೆ  ಹೇರಿಸಿದ್ದಾರೆ. ಸವಾಲೆಸೆದ ನಂತರ ಅದಕ್ಕೆ ಬದ್ಧರಾಗಬೇಕಿದ್ದ ಬೋಪಯ್ಯ ಅವರು 4 ದಿನಗಳ ಕಾಲ ನಿಷೇಧಾಜ್ಞೆ ಹೇರಿಸಿದ್ದು ಏಕೆ? ಇದು ಶಾಸಕರ ಯಾವ ರೀತಿಯ ಪೌರುಷತನ? ಎಂದು ಖಾರವಾಗಿ ಪ್ರಶ್ನಿಸಿದ ಟಾಟು ಮೊಣ್ಣಪ್ಪ, ಈಗ ಜಿಲ್ಲೆಯ ಶಾಸಕರಿಗೆ ತಾಕತ್ತಿದ್ದರೆ ಹೇರಲಾಗಿರುವ ನಿಷೇಧಾಜ್ಞೆಯನ್ನು ತೆರವುಗೊಳಿಸಲಿ ಎಂದು ಪ್ರತಿಸವಾಲೆಸೆದರು.

- Advertisement -

ಬಿಜೆಪಿ ಆಡಳಿತದಿಂದ ಕೊಡಗಿನ ಜನ ರೋಸಿ ಹೋಗಿದ್ದಾರೆ. 25 ವರ್ಷಗಳಿಂದ ಆರಿಸಿ ಬರುತ್ತಿರುವ ಈ ಇಬ್ಬರು ಶಾಸಕರ ಕಾರ್ಯವೈಖರಿ ಜಿಲ್ಲೆಯ ಮತದಾರರಿಗೆ ಜಿಗುಪ್ಸೆ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅತಿವೃಷ್ಟಿಯಿಂದಾಗಿ ವ್ಯಾಪಕ ಹಾನಿಯಾಗುತ್ತಿದೆ. ಇದುವರೆಗೂ ಇದಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಜಿಲ್ಲೆಯ ಮುಖ್ಯ ರಸ್ತೆಗಳ ದುಸ್ಥಿತಿಯಂತೂ ಹೇಳತೀರದು. ನಿರಂತರ ಬೆಲೆಯೇರಿಕೆ ಮತ್ತು ಕಳಪೆ ಗೊಬ್ಬರ ಸರಬರಾಜಿನಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿಯ ತಡೆಗೋಡೆ ನಿರ್ಮಾಣ ಸೇರಿದಂತೆ ಬಹುತೇಕ ಕಾಮಗಾರಿಗಳಲ್ಲಿ ಶಾಸಕರ ಕುಮ್ಮುಕಿನಿಂದಲೇ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಬಹಿರಂಗಗೊಂಡಿದೆ. ದಕ್ಷ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಗೆ ಕರೆ ತರುವಲ್ಲಿ ಶಾಸಕರು ತೋರುವ ಆಸಕ್ತಿ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ತೋರಿಸುತ್ತಿಲ್ಲ ಎಂದು ಆರೋಪಿಸಿದ ಟಾಟು ಮೊಣ್ಣಪ್ಪ, ತಮ್ಮ ವೈಫಲ್ಯವನ್ನು ಮರೆಮಾಚಲು  ಕೋಮುದ್ವೇಷದ ರಾಜಕಾರಣಕ್ಕೆ ಶಾಸಕರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ದೇಶದ ರಕ್ಷಣಾ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಶೌರ್ಯ ಪರಂಪರೆಯ ಕೊಡಗು ಜಿಲ್ಲೆಗೆ ಇಡೀ ರಾಷ್ಟ್ರದಲ್ಲೇ ವಿಶಿಷ್ಟ ಸ್ಥಾನಮಾನವಿತ್ತು. ಬಿಜೆಪಿಯ ಮೊಟ್ಟೆ ಹಾಗೂ ಗೂಂಡಾಗಿರಿ ರಾಜಕಾರಣದ ಮೂಲಕ ಇದಕ್ಕೆ ಕಳಂಕ ತಂದ ಶಾಸಕರಾದ ಕೆ.ಜಿ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಟಾಟು ಮೊಣ್ಣಪ್ಪ, ಮೊಟ್ಟೆ ಹೊಡೆಯುವುದು ಕೊಡಗಿನವರ ಸಂಸ್ಕೃತಿಯಲ್ಲ. ಕಾವೇರಿ ಮಾತೆ ಹಾಗೂ ಕೊಡವ ಯುವತಿಯರ ಅವಹೇಳನ ಪ್ರಕರಣದಲ್ಲಿ ತೀವ್ರ ಮುಖಭಂಗಕ್ಕೊಳಗಾಗಿದ್ದ ಬಿಜೆಪಿ, ವಿಷಯವನ್ನು ವಿಷಯದಿಂದಲೇ ಎದುರಿಸಲಾಗದೆ ವಿರೋಧಿಗಳನ್ನು ಮೋಸಗೊಳಿಸುವ ಹೇಡಿ ಸಂಸ್ಕೃತಿಯನ್ನು ಕೊಡಗಿನಲ್ಲಿ ಪ್ರಾರಂಭಿಸಿದೆ. ಈ ರೀತಿಯ ಕೆಟ್ಟ ರಾಜಕಾರಣಗಳನ್ನು ಕೊಡಗಿನ ಜನತೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಮಾತ್ರ ಮಾತನಾಡುವ ಶಾಸಕ ಅಪ್ಪಚ್ಚು ರಂಜನ್, ಇದಕ್ಕಿಂತ ಮೊದಲು ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದವರು ಯಾರು? ಈ ಬಗ್ಗೆ  ಅಪ್ಪಚ್ಚು ರಂಜನ್ ಅವರು ಏಕೆ ಮೌನ ವಹಿಸಿದ್ದಾರೆ? ಎಂದು ಕೇಳಿರುವ ಟಾಟು ಮೊಣ್ಣಪ್ಪ, ಮಡಿಕೇರಿಯಲ್ಲಿ ಮೊಟ್ಟೆ ಎಸೆದ ಕಿಡಿಗೇಡಿಗಳು ಅಪ್ಪಚ್ಚು ರಂಜನ್ ಅವರ ಅತ್ಯಪ್ತರಾಗಿದ್ದಾರೆ. ಶಾಸಕರ ಪ್ರಚೋದನೆಯಿಂದಲೇ ಈ ಕೃತ್ಯ ನಡೆದಿದೆ. ತಮ್ಮ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯತೆಯ ಕುರಿತ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಶಾಸಕರು ಮುಂದಾಗಿದ್ದಾರೆ ಎಂದು ನೇರವಾಗಿ ಟೀಕಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಜೋಯಪ್ಪ, ಹಿರಿಯ ಮುಖಂಡ ನೆರವಂಡ ಉಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಜಿ. ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಮೀನಾಜ್ ಪ್ರವೀಣ್ ಉಪಸ್ಥಿತರಿದ್ದರು.



Join Whatsapp